‘ರಾಷ್ಟ್ರೀಯ ಸ್ಮೃತಿ ಸ್ಥಳ’ದಲ್ಲಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣ; ಮಾಜಿ ಪ್ರಧಾನಿಯ ಕುಟುಂಬಿಕರ ಸಮ್ಮತಿ

ಮನಮೋಹನ್ ಸಿಂಗ್ | PTI
ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಂಗತ ಮನಮೋಹನ್ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ನಿವೇಶನದ ಆಯ್ಕೆ ಅಂತಿಮಗೊಂಡಿದೆ. ರಾಷ್ಟ್ರೀಯ ಸ್ಮತಿ ಸ್ಥಳದಲ್ಲಿರುವ ಪ್ರಸ್ತಾವಿತ ನಿವೇಶನದಲ್ಲಿ ಸ್ಮಾರಕ ನಿರ್ಮಿಸುವುದಕ್ಕೆ ಮನಮೋಹನ್ಸಿಂಗ್ ಅವರ ಕುಟುಂಬ ಸಮ್ಮತಿಯನ್ನು ನೀಡಿದೆ.
ಪ್ರಸ್ತಾವಿತ ನಿವೇಶನದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆಯನ್ನು ಸೂಚಿಸಿ ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಿಂಗ್ ಅವರ ಕುಟುಂಬವು ಪತ್ರವೊಂದನ್ನು ಬರೆದಿರುವುದಾಗಿ ಅದರ ನಿಕಟವರ್ತಿ ಮೂಲಗಳು ತಿಳಿಸಿವೆ.
ಮನಮೋಹನ್ಸಿಂಗ್ ಅವರ ಮೂವರು ಪುತ್ರಿಯರು, ಅವರ ಪತಿ ಹಾಗೂ ಮಾಜಿ ವಿತ್ತ ಸಚಿವರೊಬ್ಬರು ಪ್ರಸ್ತಾವಿತ ಸ್ಮಾರಕ್ಕೆ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿದ್ದಾರೆಂದು ಹೇಳಿವೆ.
900 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನವು, ಅನೇಕ ಮಾಜಿ ಪ್ರಧಾನಿಗಳು ಹಾಗೂ ರಾಷ್ಟ್ರಪತಿಗಳ ಸ್ಮಾರಕಗಳಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿದೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಮಾರಕವು ಮನಮೋಹನ್ಸಿಂಗ್ ಅವರ ಪ್ರಸ್ತಾವಿತ ಸ್ಥಳದ ಸಮೀಪದಲ್ಲಿಯೇ ಇದೆ.
ಮನಮೋಹನ್ಸಿಂಗ್ ಅವರ ಸ್ಮರಣಾರ್ಥವಾಗಿ ರಚಿಸಲಾಗುವ ಟ್ರಸ್ಟ್ಗೆ ಸ್ಮಾರಕ ನಿರ್ಮಾಣದ ನಿವೇಶನವನ್ನು ವರ್ಗಾಯಿಸಲಾಗುವುದು. ಅವರ ಕುಟುಂಬವು ಶೀಘ್ರದಲ್ಲಿಯೇ ಟ್ರಸ್ಟ್ನ ಸದಸ್ಯರ ಹೆಸರುಗಳನ್ನು ಪ್ರಸ್ತಾವಿಸಲಿದೆ ಹಾಗೂ ಅಂತಿಮಗೊಳಿಸಲಿದೆಯೆಂದು ಮೂಲಗಳು ತಿಳಿಸಿವೆ.
ಟ್ರಸ್ಟ್ ರಚನೆಯಾದ ಬಳಿಕ ಸ್ಮಾರಕ ನಿರ್ಮಾಣಕ್ಕಾಗಿ ಸರಕಾರವು 25 ಲಕ್ಷ ರೂ. ಅನುದಾನವನ್ನು ವರ್ಗಾಯಿಸಲಿದೆ. ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ)ಯ ಅಧಿಕಾರಿಗಳು ಸ್ಮಾರಕ ನಿರ್ಮಾಣಗೊಳ್ಳಲಿರುವ ನಿವೇಶನಕ್ಕೆ ಈಗಾಗಲೇ ಭೇಟಿ ನೀಡಿದ್ದಾರೆ.
ಭಾರತದ ಆರ್ಥಿಕ ಸುಧಾರಣೆಗಳ ಮಹಾಶಿಲ್ಪಿ ಎಂದೇ ಪರಿಗಣಿಸಲ್ಪಟ್ಟಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ಸಿಂಗ್ ಅವರು 2024ರ ಡಿಸೆಂಬರ್ 26ರಂದು ತನ್ನ 92ನೇ ವಯಸ್ಸಿನಲ್ಲಿ ವೃದ್ದಾಪ್ಯದ ತೊಂದರೆಗಳಿಂದಾಗಿ ಮೃತಪಟ್ಟಿದ್ದರು.