ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮನು ಭಾಕರ್
ಮಹಿಳೆಯರ 25 ಮೀಟರ್ ಸ್ಪೋಟ್ರ್ಸ್ ಪಿಸ್ತೂಲ್ನಲ್ಲಿ 5ನೇ ಸ್ಥಾನ
Photo: twitter/realmanubhaker
ಚಾಂಗ್ವೋನ್ (ದಕ್ಷಿಣ ಕೊರಿಯ), ಅ. 28: ದಕ್ಷಿಣ ಕೊರಿಯದ ಚಾಂಗ್ವೊನ್ನಲ್ಲಿ ನಡೆಯುತ್ತಿರುವ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಸ್ನಲ್ಲಿ ಭಾರತದ ಮನು ಭಾಕರ್ ಶನಿವಾರ ಮಹಿಳೆಯರ 25 ಮೀಟರ್ ಸ್ಪೋಟ್ರ್ಸ್ ಪಿಸ್ತೂಲ್ನಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಅರ್ಹತೆಯನ್ನೂ ಗಳಿಸಿದ್ದಾರೆ. ಇದು ಭಾರತಕ್ಕೆ ಲಭಿಸಿದ 11ನೇ ಒಲಿಂಪಿಕ್ಸ್ ಕೋಟವಾಗಿದೆ.
ಮನು ಭಾಕರ್ ಫೈನಲ್ನಲ್ಲಿ 24 ಅಂಕಗಳನ್ನು ಗಳಿಸಿದರು. ಆದರೆ, ಬಳಿಕ ನಡೆದ ಶೂಟ್-ಆಫ್ನಲ್ಲಿ ಅವರು ಹೊರಬಿದ್ದರು. ಇರಾನ್ನ ಹನಿಯೇಹ್ ರುಸ್ತಾಮಿಯ ದ್ವಿತೀಯ ಸ್ಥಾನ ಪಡೆದರು. ಉಳಿದಂತೆ ಒಂದು, ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಚೀನಾದ ಸ್ಪರ್ಧಿಗಳು ಪಡೆದರು.
ಸ್ಪರ್ಧೆಯುದ್ದಕ್ಕೂ ಮನು ಉತ್ತಮ ಹೋರಾಟ ಪ್ರದರ್ಶಿಸಿದರು. ಅವರು ಒಂದು ಹಂತದಲ್ಲಿ ಅಗ್ರ ಎರಡು ಸ್ಥಾನಗಳಿಗೆ ಸ್ಪರ್ಧೆಯಲ್ಲಿದ್ದರು. ಆದರೆ ಏಳನೇ ಮತ್ತು ಎಂಟನೇ ಸರಣಿಯಲ್ಲಿ ಅವರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಚೀನಾದ ಝಾವೊ ನಾನ್ ಜೊತೆಗೆ ಶೂಟ್-ಆಫ್ಗಿಳಿಯಬೇಕಾಯಿತು.
ಅವರಿಗೆ ಪದಕ ಕೈತಪ್ಪಿದರೂ ಮಹತ್ವದ ಒಲಿಂಪಿಕ್ ಕೋಟ ಲಭಿಸಿತು.
ಪಿಸ್ತೂಲ್ ಸ್ಪರ್ಧೆಗಳಲ್ಲಿ ಒಲಿಂಪಿಕ್ ಕೋಟ ಪಡೆದ ಎರಡನೇ ಭಾರತೀಯ ಶೂಟರ್ ಮನು ಆಗಿದ್ದಾರೆ. ಇದಕ್ಕೂ ಮೊದಲು, 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಒಲಿಂಪಿಕ್ ಕೋಟ ಗೆದ್ದಿದ್ದರು.
ರೈಫಲ್ ಸ್ಪರ್ಧೆಗಳಲ್ಲಿ ಭಾರತ ಈವರೆಗೆ ಏಳು ಕೋಟಗಳನ್ನು ಪಡೆದಿದೆ.
ಭಾರತಕ್ಕೆ 4 ಬೆಳ್ಳಿ
ಶನಿವಾರ, ಭಾರತ ನಾಲ್ಕು ಪದಕಗಳನ್ನು ಗೆದ್ದಿದೆ. ಎಲ್ಲವೂ ಬೆಳ್ಳಿ ಪದಕಗಳು. ಮನು, ಇಶಾ ಮತ್ತು ರಿದಮ್ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು.
10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯ ಫೈನಲ್ನಲ್ಲಿ, ದಿವ್ಯಾಂಶು ಸಿಂಗ್ ಪನ್ವರ್ ಮತ್ತು ರಮಿತಾ ಜಿಂದಾಲ್ ಚೀನಾದ ಜೋಡಿಯೆದುರು 12-16ರ ಸೋಲನುಭವಿಸಿದರು.
ಜೂನಿಯರ್ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಿಮ್ರಾನ್ಪ್ರೀತ್ ಕೌರ್ ಬ್ರಾರ್ ಎರಡು ಬೆಳ್ಳಿ ಪದಕಗಳನ್ನು ಗೆದ್ದರು.
ಅವರು ಮೇಘನಾ ಸಡುಲ ಮತ್ತು ತೇಜಸ್ವಿನಿ ಜೊತೆಗೆ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಬಳಿಕ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ಚೀನಾದ ಲಿಯಾಂಗ್ ಕ್ಸಿಯಾವೋಯ ಎದುರು ಪರಾಭವಗೊಂಡು ಬೆಳ್ಳಿ ಪಡೆದರು.