ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹಲವರು ಶಾಮೀಲು: ಮುಖ್ಯ ಆರೋಪಿಯ ತಾಯಿಯ ಹೇಳಿಕೆ
ಪುತ್ರನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆಯೆಂದು ಅಳಲು
ಸಾಂದರ್ಭಿಕ ಚಿತ್ರ | PTI
ಕೋಲ್ಕತಾ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ನಡೆದ 31 ವರ್ಷದ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮುಖ್ಯ ಶಂಕಿತ ಆರೋಪಿ ಸಂಜಯ್ರಾಯ್ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಲಾದ ಹೊರತಾಗಿಯೂ, ಆತನ ತಾಯಿ ತನ್ನ ಪುತ್ರನ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ತನ್ನ ಮಗನನ್ನು ಈ ಪ್ರಕರಣದಲ್ಲಿ ಸಿಲುಕಿಲಾಗಿದೆ ಹಾಗೂ ಹಲವಾರು ಮಂದಿ ಈ ಅಪರಾಧ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಅವರು ಹೇಳಿದ್ದಾರೆ.
ಈ ಘಟನೆಗೆ ಯಾರೆಲ್ಲಾ ಕಾರಣರಾಗಿದ್ದಾರೆಯೋ ಅವರಿಗೆ ಶಿಕ್ಷೆಯಾಗಬೇಕೆಂದು ಆಕೆ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.
ಸರಕಾರಿ ಸ್ವಾಮ್ಯದ ಆರ್.ಜಿ.ಕರ್ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಸಾಮಾಜಿಕ ಕಾರ್ಯಕರ್ತನಾದ ಸಂಜಯ್ ರಾಯ್ ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ,ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಹಾಗೂ ತಾನು ಈ ಕೃತ್ಯವನ್ನು ಎಸಗಿದ್ದಾಗಿಯೂ ಆತ ಒಪ್ಪಿಕೊಂಡಿದ್ದಾನೆ.
ತನ್ನ ಪುತ್ರ ಕೋಲ್ಕತಾದ ಭಬಾನಿಪುರದಲ್ಲಿ ಸಾಧಾರಣ ಮನೆಯೊಂದರಲ್ಲಿ ವಾಸವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆತ ಹೆಚ್ಚಿನ ಸಮಯವನ್ನು ಪೊಲೀಸ್ ಠಾಣೆಗಳಲ್ಲಿ ಕಳೆಯುತ್ತಿದ್ದ. ಆತ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆತನ ತಂದೆಯ ನಿಧನದ ಬಳಿಕ ಆತ ಕುಟುಂಬವನ್ನು ನಿರ್ವಹಿಸುತ್ತಿದ್ದ ಎಂದು ಆಕೆ ಹೇಳಿರುವುದಾಗಿ ಎನ್ಡಿಟಿವಿ ವರದಿ ತಿಳಿಸಿದೆ.
ಈ ಕೃತ್ಯದಲ್ಲಿ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಶಾಮೀಲಾಗಿದ್ದು, ಸಂಜಯ್ ರಾಯ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆಯೆಂದು ಮೃತ ವೈದ್ಯೆಯ ತಂದೆ ಕೂಡಾ ಆರೋಪಿಸಿದ್ದರು.