ಮಾವೋವಾದಿಗಳೊಂದಿಗೆ ಸಂಪರ್ಕ ಆರೋಪ: ಪ್ರೊ. ಸಾಯಿಬಾಬಾ ಖುಲಾಸೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸರಕಾರ
ಪ್ರೊ. ಜಿ.ಎನ್.ಸಾಯಿಬಾಬಾ | Photo:telegraphindia
ಮುಂಬೈ: ಮವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಸೆರೆವಾಸದಲ್ಲಿದ್ದ ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಹಾಗೂ ಇತರ ಐವರು ಆರೋಪಿಗಳನ್ನು ಮಾರ್ಚ್ 5ರಂದು ಖುಲಾಸೆಗೊಳಿಸಿರುವ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಮಹಾರಾಷ್ಟ್ರ ಸರಕಾರವು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಾಯಿಬಾಬಾ ಹಾಗೂ ಇನ್ನಿತರ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಗಡ್ಚಿರೋಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ನ ನಾಗಪುರ ಪೀಠವು ವಜಾಗೊಳಿಸಿತ್ತು.
ನ್ಯಾ. ವಿನಯ್ ಜೋಶಿ ಹಾಗೂ ನ್ಯಾ. ವಾಲ್ಮೀಕಿ ಎಸ್.ಎ. ಮೆನೆಝೆಸ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಎಲ್ಲ ಅರೋಪಿಗಳನ್ನು ತಲಾ ರೂ. 50,000 ಮೊತ್ತದ ಜಾಮೀನು ಬಾಂಡ್ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು. ಆರೋಪಿಗಳ ವಿರುದ್ಧ ಆರೋಪವನ್ನು ಸಂಶಯಕ್ಕೆಡೆ ಇಲ್ಲದಂತೆ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿರುವುದರಿಂದ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡುತ್ತಿದ್ದೇವೆ ಎಂದು ಹೇಳಿತ್ತು. ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ದಾಖಲಿಸಿಕೊಂಡಿರುವ ಪ್ರಕರಣವನ್ನು ಅಮಾನ್ಯ ಹಾಗೂ ಅನೂರ್ಜಿತಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಅಕ್ಟೋಬರ್ 2022ರಲ್ಲಿ ಬಾಂಬೆ ಹೈಕೋರ್ಟ್ನ ಈ ಹಿಂದಿನ ವಿಭಾಗೀಯ ಪೀಠವು ವಿಕಲಚೇತನ ಪ್ರಾಧ್ಯಾಪಕರನ್ನು ಖುಲಾಸೆಗೊಳಿಸಿದ ನಂತರ ನ್ಯಾ. ಜೋಶಿ ಹಾಗೂ ನ್ಯಾ. ಮೆನೆಝೆಸ್ ಅವರ ನ್ಯಾಯಪೀಠವು ಪ್ರಕರಣದ ಮರು ವಿಚಾರಣೆ ನಡೆಸಿತ್ತು.