ಆರ್ ಜಿ ಕರ್ ಆಸ್ಪತ್ರೆಯ 50 ವೈದ್ಯರ ಸಾಮೂಹಿಕ ರಾಜೀನಾಮೆ
PC: screengrab/x.com/digirockx
ಕೊಲ್ಕತ್ತಾ: ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದ ಇಲ್ಲಿನ ಆರ್ಜಿ ಕರ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಆಮರಣ ಉಪವಾಸ ಕೈಗೊಂಡಿರುವ ಏಳು ಮಂದಿ ಕಿರಿಯ ವೈದ್ಯರಿಗೆ ಬೆಂಬಲಾರ್ಥವಾಗಿ ಆಸ್ಪತ್ರೆಯ 50 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಆಮರಣ ಉಪವಾಸ ಕೊನೆಗೊಳಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ತರುವ ಉದ್ದೇಶದಿಂದ 50ಕ್ಕೂ ಹೆಚ್ಚು ವೈದ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. "ಈ ಸಾಂಕೇತಿಕ ಕ್ರಮದಿಂದ ಒಂದು ಹೆಜ್ಜೆ ಮುಂದೆ ಹೋಗಿ ನಾವು ವೈಯಕ್ತಿಕವಾಗಿ ರಾಜೀನಾಮೆ ಸಲ್ಲಿಸಲು ಸಿದ್ಧ" ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರ ಈ ರಾಜೀನಾಮೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಮಂಗಳವಾರ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಾಂಕೇತಿಕ ಸಾಮೂಹಿಕ ರಾಜೀನಾಮೆಯನ್ನು ಟಿಎಂಸಿ ಪ್ರಶ್ನಿಸಿದೆ. ವೈದ್ಯರು ಪ್ರಚೋದಕರಾಗಿ ವರ್ತಿಸುತ್ತಿದ್ದಾರೆ ಎಂದು ಪಕ್ಷ ಟೀಕಿಸಿದೆ. "ಒಪ್ಪಂದ ಪತ್ರಗಳಿಗೆ ಸಹಿ ಮಾಡಿ ಕ್ಯಾಮೆರಾ ಮುಂದೆ ನಗುತ್ತಿದ್ದಾರೆ. ಇದು ಜವಾಬ್ದಾರಿಯುತ ವರ್ತನೆಯೇ? ಕಿರಿಯ ವೈದ್ಯರನ್ನು ಅವರು ಪ್ರಚೋದಿಸುತ್ತಿದ್ದಾರೆ. ಅವರಿಗೆ ರಾಜಕೀಯ ಆಸಕ್ತಿಗಳಿವೆ" ಎಂದು ಪಕ್ಷದ ಮುಖಂಡ ಕುನಾಲ್ ಘೋಷ್ ಟೀಕಿಸಿದ್ದಾರೆ.
ಇತರ ಎರಡು ಸರ್ಕಾರಿ ಆಸ್ಪತ್ರೆಗಳಾದ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಐಪಿಜಿಎಂಇಆರ್ ಆಸ್ಪತ್ರೆಯ ವೈದ್ಯಕರು ಕೂಡಾ ನಿರ್ದೇಶಕರಿಗೆ ಪತ್ರ ಬರೆದು 24 ಗಂಟೆಗಳ ಗಡುವುದು ನೀಡಿದ್ದಾರೆ. ಬುಧವಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಎನ್ಆರ್ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಕೂಡಾ ಇದೇ ಎಚ್ಚರಿಕೆ ನೀಡಿದ್ದಾರೆ