ಮಹಿಳಾ ಚಾಲಕರ ಹುಲಿ ಸಫಾರಿಯ ಕನಸಿನ ಮೇಲೆ ಪುರುಷರ ಸವಾರಿ
ಕಮರುತ್ತಿದೆ ಮಹಾರಾಷ್ಟ್ರದ ಅರಣ್ಯ ಇಲಾಖೆ ಆರಂಭಿಸಿದ್ದ ಭರಾರಿ ಯೋಜನೆ
Photo: theprint.in
ಶ್ರೀಖೇಡಾ : ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ-ಅಂಧಾರಿ ಹುಲಿ ಮೀಸಲು ಅರಣ್ಯವು 1,107 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದ್ದು, ಸುತ್ತುಮುತ್ತಲಿನ 95 ಗ್ರಾಮಗಳಲ್ಲಿ ವಾಸವಾಗಿರುವ ಒಂದು ಲಕ್ಷಕ್ಕೂ ಹೆಚ್ಚಿನ ಜನರಿಗೆ ಜೀವನಾಧಾರವಾಗಿದೆ. ಇಂದು ಈ ಗ್ರಾಮಗಳ ಆರ್ಥಿಕತೆಯು ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದು, ಅರಣ್ಯ ಇಲಾಖೆಯು ಮುಖ್ಯ ಉದ್ಯೋಗದಾತನಾಗಿದೆ.
ಪ್ರವಾಸಿಗಳೊಂದಿಗೆ ಬರುವ ಗೈಡ್ ಗಳು ಪ್ರತಿ ಸಲ 600 ರೂ.ಗಳನ್ನು ಗಳಿಸುತ್ತಿದ್ದರೆ, ಟೈಗರ್ ಸಫಾರಿಗೆ ಪ್ರವಾಸಿಗಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಒಂದು ದಿನದಲ್ಲಿ ಇದರ ಮೂರು ಪಟ್ಟು ಆದಾಯವನ್ನು ಗಳಿಸುತ್ತಾರೆ ಎಂದು ThePrint ವರದಿ ಮಾಡಿದೆ.
Photo : The Print
ಮಹಿಳೆಯರ ಸಬಲೀಕರಣಕ್ಕಾಗಿ ಅರಣ್ಯ ಇಲಾಖೆ ಆರಂಭಿಸಿದ್ದ ಭರಾರಿ ಯೋಜನೆಯ ಫಲಾನುಭವಿಗಳಾಗಿರುವ ತಡೋಬಾ-ಅಂಧಾರಿ ಟೈಗರ್ ರಿಸರ್ವ್ನ ಸುತ್ತುಮುತ್ತಲಿನ ಗ್ರಾಮಗಳ 70 ಮಹಿಳೆಯರು ವಾಹನ ಚಾಲನೆ ತರಬೇತಿಯನ್ನು ಉಚಿತವಾಗಿ ಪಡೆದಿದ್ದಾರೆ. ಇಲಾಖೆಯು ಇವರಿಗೆ ವಾಹನ ಚಾಲನೆ ಪರವಾನಿಗೆಗಳನ್ನೂ ಕೊಡಿಸಿದೆ. ತರಬೇತಿಯ ಬಳಿಕ ಈ ಮಹಿಳೆಯರು ತಮ್ಮ ಸ್ವಂತ ವಾಹನಗಳನ್ನು ಖರೀದಿಸಿ ಪ್ರವಾಸಿಗಳನ್ನು ಟೈಗರ್ ಸಫಾರಿಗೆ ಕರೆದೊಯ್ಯುವಂತಾಗಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿತ್ತು. ಆದರೆ ತರಬೇತಿ ಪಡೆದು ಎಂಟು ತಿಂಗಳುಗಳಾದರೂ ಈ ಮೀಸಲು ಅರಣ್ಯವು ಮಹಿಳಾ ಚಾಲಕಿಯರನ್ನು ಇನ್ನಷ್ಟೇ ನೋಡಬೇಕಿದೆ.
ಜಂಗಲ್ ಸಫಾರಿ ಪ್ರವಾಸೋದ್ಯಮವು ಪುರುಷ ಪ್ರಾಬಲ್ಯದ ಭದ್ರಕೋಟೆಯಾಗಿದೆ. ಮಹಿಳೆಯರು ತಮ್ಮ ವಾಹನಗಳಲ್ಲಿ ಪ್ರವಾಸಿಗಳನ್ನು ಟೈಗರ್ ಸಫಾರಿಗೆ ಕರೆದೊಯ್ದು ಆದಾಯ ಗಳಿಸಲು ಉತ್ಸುಕರಾಗಿದ್ದರೂ ಹಣ ಮತ್ತು ಪುರುಷರ ಅಡ್ಡಿ ಅವರನ್ನು ಕಾಡುತ್ತಿದೆ. ಸ್ವಂತ ಸಫಾರಿ ವಾಹನಗಳಿದ್ದವರು ಈ ಮಹಿಳೆಯರನ್ನು ಚಾಲಕಿಯರನ್ನಾಗಿ ನೇಮಿಸಿಕೊಳ್ಳುತ್ತಿಲ್ಲ.
Photo : The Print
ಶ್ರೀಖೇಡಾ ಮತ್ತು ಸುತ್ತಲಿನ ಗ್ರಾಮಗಳ ಪುರುಷರಿಗೆ ಇದು ಸುಲಭವಾಗಿದೆ. ಎಸ್ ಯು ವಿ ಚಾಲನೆಯನ್ನು ಕಲಿತು ವಾಹನವನ್ನು ಖರೀದಿ ಮಾಡಿ ಅಥವಾ ಬಾಡಿಗೆಗೆ ಪಡೆದುಕೊಂಡು ಜಂಗಲ್ ಸಫಾರಿಗೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡರೆ ಅವರು ಟೈಗರ್ ಸಫಾರಿಗೆ ಪ್ರವಾಸಿಗಳನ್ನು ಕರೆದೊಯ್ಯಬಹುದು. ಆದರೆ ಮಹಿಳೆಯರಿಗೆ ಸಾಮಾಜಿಕ ಒತ್ತಡ ಮತ್ತು ಹಣಕಾಸು ನಿರ್ಬಂಧಗಳು ಕಾಡುತ್ತಿವೆ. ಅಲ್ಲದೆ ಒಳಗಿಂದೊಳಗೆ ಅವರಲ್ಲಿನ ಅಳುಕು ಅವರ ಪ್ರಗತಿಗೆ ಅಡ್ಡಿಯಾಗಿದೆ.
ಭರಾರಿ ಯೋಜನೆಯ ಫಲಾನುಭವಿಗಳಾಗಿರುವ 70 ಮಹಿಳೆಯರ ಪೈಕಿ ಕೆಲವರು ಸಾಲಸೋಲ ಮಾಡಿ ಮಾರುತಿ ಸುಝುಕಿ ಜಿಪ್ಸಿಗಳನ್ನು ಖರೀದಿಸಿದ್ದಾರೆ.
Photo : The Print
ಟೈಗರ್ ರಿಸರ್ವ್ ನ ಪ್ರತಿಯೊಂದು ಗೇಟಿನ ಹೊರಗೆ ನಿಗದಿತ ಸಂಖ್ಯೆಯ ಎಸ್ ಯು ವಿ ಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ. ಪ್ರಸ್ತುತ 22 ಗೇಟ್ ಗಳಿಗಾಗಿ ಒಟ್ಟು 362 ಜಿಪ್ಸಿ ವಾಹನಗಳಿಗೆ ಪಾರ್ಕಿಂಗ್ ಅನುಮತಿಯನ್ನು ನೀಡಲಾಗಿದೆ. ಪ್ರತಿ ಸಫಾರಿಯು ಇಲಾಖೆಗೆ 2,700 ರೂ.ಗಳ ಆದಾಯವನ್ನು ತರುತ್ತದೆ. ಸಫಾರಿಗಳನ್ನು ಸಾಮಾನ್ಯವಾಗಿ ದಿನಕ್ಕೆರಡು ಬಾರಿ ನಡೆಸಲಾಗುತ್ತದೆ ಮತ್ತು ವಾಹನಗಳ ಚಾಲಕರು ತಿಂಗಳಿಗೆ 70,000 ರೂ.ಗಳಿಗೂ ಅಧಿಕ ಹಣವನ್ನು ಗಳಿಸುತ್ತಾರೆ.
ದುರಂತವೆಂದರೆ ಈ 22 ಗೇಟ್ ಗಳ ಪೈಕಿ ಒಂದರ ಬಳಿಯೂ ಮಹಿಳಾ ಚಾಲಕಿಯರ ವಾಹನಗಳಿಗೆ ಅವಕಾಶವಿಲ್ಲ. ಗ್ರಾಮದಲ್ಲಿಯ ಪುರುಷರು ಅದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮ ವಾಹನಗಳಲ್ಲಿ ಪ್ರವಾಸಿಗಳನ್ನು ಟೈಗರ್ ಸಫಾರಿಗೆ ಕರೆದೊಯ್ದು ನಾಲ್ಕು ಕಾಸು ಗಳಿಸುವ ಈ ಗ್ರಾಮೀಣ ಮಹಿಳೆಯರ ಕನಸು ನಿಧಾನವಾಗಿ ಕಮರುತ್ತಿದೆ.
ಮಹಿಳೆಯರು ಸಫಾರಿ ಚಾಲಕರಾಗುವಲ್ಲಿ ಎದುರಿಸುತ್ತಿರುವ ಅಡೆತಡೆಗಳು ಭಾರತದ ರಸ್ತೆಗಳಲ್ಲಿ ಅಸ್ತಿತ್ವದಲ್ಲಿರುವ ಆಳವಾಗಿ ಬೇರೂರಿರುವ ಲಿಂಗ ಪಕ್ಷಪಾತವನ್ನು ಪ್ರತಿಬಿಂಬಿಸುತ್ತವೆ. 2020ರಲ್ಲಿ ದೇಶದಲ್ಲಿ ವಿತರಿಸಲಾದ 105 ಲಕ್ಷಕ್ಕೂ ಅಧಿಕ ವಾಹನ ಚಾಲನೆ ಪರವಾನಿಗೆಗಳ ಪೈಕಿ ಕೇವಲ ಶೇ.14.9ರಷ್ಟನ್ನು ಮಹಿಳೆಯರಿಗೆ ನೀಡಲಾಗಿತ್ತು.
Photo : The Print
ಮಹಿಳೆಯರು ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಿವಿದೆ. ಇದೊಂದು ಪ್ರಕ್ರಿಯೆಯಾಗಿದೆ ಮತ್ತು ಅದನ್ನು ಸ್ವೀಕರಿಸಲು ಸಮಯಾವಕಾಶ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.
2016ರಲ್ಲಿ ಮಹಿಳೆಯರನ್ನು ನೇಚರ್ ಗೈಡ್ ಅಥವಾ ಪ್ರಕೃತಿ ಮಾರ್ಗದರ್ಶಿಗಳನ್ನಾಗಿ ತರಬೇತಿ ನೀಡಲು ಇಲಾಖೆಯು ನಿರ್ಧರಿಸಿದ್ದಾಗಲೂ ಇಂತಹುದೇ ಹಿನ್ನಡೆಯುಂಟಾಗಿತ್ತು. ಮಹಿಳೆಯರು ಈ ಕೆಲಸ ಮಾಡುವುದನ್ನು ಗ್ರಾಮಸ್ಥರು ಕ್ರಮೇಣ ಒಪ್ಪಿಕೊಂಡಿದ್ದು, ಈಗ ಸಾಕಷ್ಟು ಮಹಿಳೆಯರು ಪ್ರಕೃತಿ ಮಾರ್ಗದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ.