ಭಾರತೀಯ ವ್ಯಾಪಾರಿ ಹಡಗಿನ ಮೇಲೆ ಕ್ಷಿಪಣಿ ದಾಳಿ
22 ಭಾರತೀಯ ಸಿಬ್ಬಂದಿಯಿದ್ದ ಹಡಗಿನ ತುರ್ತು ನೆರವಿಗೆ ಧಾವಿಸಿದ ನೌಕಾದಳ
Photo: ndtv
ಹೊಸದಿಲ್ಲಿ : ಗಲ್ಫ್ ಆಫ್ ಏಡೆನ್ನಲ್ಲಿ ಕ್ಷಿಪಣಿ ದಾಳಿಗೊಳಗಾದ ವ್ಯಾಪಾರಿ ಹಡಗಿನ ತುರ್ತು ಕರೆಗೆ ಭಾರತೀಯ ನೌಕಾಪಡೆಯ ಕ್ಷಿಪಣಿ ವಿಧ್ವಂಸಕ ನೌಕೆ INS ವಿಶಾಖಪಟ್ಟಣಂ ಪ್ರತಿಕ್ರಿಯಿಸಿದೆ ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ಶನಿವಾರ ತಿಳಿಸಿದೆ.
ದಾಳಿಗೊಳಗಾದ ಹಡಗಿನಲ್ಲಿ 22 ಭಾರತೀಯ ಮತ್ತು ಬಾಂಗ್ಲಾದೇಶದ ಸಿಬ್ಬಂದಿಗಳು ಇದ್ದರು ಎಂದು ndtv ವರದಿ ಮಾಡಿದೆ.
ವ್ಯಾಪಾರಿ ಹಡಗು ಮಾರ್ಲಿನ್ ಲೌಂಡಾದ ಮೇಲೆ ಕ್ಷಿಪಣಿ ದಾಳಿ ವರದಿಯಾದ ಕೂಡಲೇ INS ವಿಶಾಖಪಟ್ಟಣಂ ನೌಕೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತು ಎಂದು ತಿಳಿದು ಬಂದಿದೆ. ಕ್ಷಿಪಣಿ ದಾಳಿಯಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸರಕು ಸಾಗಣೆ ಹಡಗಿಗೆ ಹತ್ತಿಕೊಂಡಿರುವ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ INS ವಿಶಾಖಪಟ್ಟಣಂ ನೌಕೆಯು ತೊಡಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
"ಭಾರತೀಯ ನೌಕಾಪಡೆಯು ವ್ಯಾಪಾರಿ ಹಡಗುಗಳನ್ನು ರಕ್ಷಿಸಲು ಮತ್ತು ಸಮುದ್ರದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ" ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ - ಹಮಾಸ್ ಸಂಘರ್ಷ ಹೆಚ್ಚಾದ ಬಳಿಕ ಹೌದಿಗಳು ಕೆಂಪು ಸಮುದ್ರದಲ್ಲಿ ಇಸ್ರೇಲ್ ಮೂಲದ ವ್ಯಾಪಾರಿ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ದಾಳಿಗಳು ಇಸ್ರೇಲ್ ಯುದ್ಧ ಬೆಂಬಲಿಸದ ದೇಶಗಳ ಹಡಗುಗಳ ಮೇಲೆಯೂ ನಡೆಯುತ್ತಿರುವುದು ಸಮುದ್ರದ ಮೇಲಿನ ವ್ಯಾಪಾರ ವಹಿವಾಟುಗಳ ಮೇಲೆ ಕಳವಳವುಂಟು ಮಾಡಿದೆ. ಭಾರತೀಯ ನೌಕಾದಳದ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಇಂತಹ ಕಡಲ ಘಟನೆಗಳನ್ನು ದೃಢವಾಗಿ ಎದುರಿಸಲು ಸೂಚನೆಗಳನ್ನು ನೀಡಿದ್ದಾರೆ.
ಜನವರಿ 18 ರಂದು, ಭಾರತೀಯ ಸಿಬ್ಬಂದಿಗಳಿದ್ದ ವ್ಯಾಪಾರಿ ಹಡಗು ಏಡನ್ ಕೊಲ್ಲಿಯಲ್ಲಿ ಡ್ರೋನ್ಗಳ ದಾಳಿಗೆ ಒಳಗಾಗಿತ್ತು. INS ವಿಶಾಖಪಟ್ಟಣ ನೌಕೆಯೇ ಈ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿತ್ತು.