ನರೇಗಾ ಬೇಡಿಕೆ ಆಧಾರಿತ ಯೋಜನೆ | ನೋಂದಣಿ ಗುರಿ ನಿಗದಿ ಸಾಧ್ಯವಿಲ್ಲ : ಕೇಂದ್ರ ಸರಕಾರ
PTI
ಹೊಸದಿಲ್ಲಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆಯ ನೋಂದಣಿ ಪ್ರಮಾಣ ಕುಗ್ಗುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಹಣಕಾಸು ವರ್ಷ ಇನ್ನೂ ಮುಂದುವರಿಯುತ್ತಿದ್ದು, ಬೇಡಿಕೆ ಆಧಾರಿತವಾದ ಈ ಯೋಜನೆಗೆ ಒಟ್ಟು ನೋಂದಣಿ ಗುರಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿ ಕುರಿತು ಲಿಬ್ಟೆಕ್ ಇಂಡಿಯಾ ಸಂಸ್ಥೆ ನಡೆಸಿರುವ ಅಧ್ಯಯನ ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಯೋಜನೆಯಲ್ಲಿ ನೋಂದಣಿಯಾಗಿರುವ ಸಕ್ರಿಯ ಕಾರ್ಮಿಕರ ಸಂಖ್ಯೆ ಶೇ. 8ರಷ್ಟು ಕುಸಿತಗೊಂಡಿದೆ ಎಂದು ಹೇಳಲಾಗಿದೆ.
ಒಟ್ಟಾರೆ 39 ಲಕ್ಷ ಕೆಲಸಗಾರರ ಹೆಸರನ್ನು ಅಳಿಸಿ ಹಾಕಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದ್ದು, ಇದರಿಂದ ಅಕ್ರಮ ರದ್ದತಿ ಬಗ್ಗೆ ಕಳವಳ ವ್ಯಕ್ತವಾಗಿದೆ. 84.8 ಲಕ್ಷ ಕಾರ್ಮಿಕರ ಹೆಸರನ್ನು ಅಳಿಸಿ ಹಾಕಲಾಗಿದ್ದರೆ, ಕೇವಲ 45 ಲಕ್ಷ ಹೊಸ ಕಾರ್ಮಿಕರ ಹೆಸರನ್ನು ಮಾತ್ರ ಈ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಯೋಜನೆಯಡಿಯಲ್ಲಿನ ಉದ್ಯೋಗಾವಕಾಶಗಳು ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 184 ಕೋಟಿಯಷ್ಟಿದ್ದ ಮಾನವ ದಿನಗಳು 154 ಕೋಟಿ ದಿನಗಳಿಗೆ ಇಳಿಕೆಯಾಗಿವೆ ಎಂದೂ ಲಿಬ್ಟೆಕ್ ವರದಿ ಹೇಳಿದೆ.
ಈ ವರದಿಯ ಕುರಿತು ಸ್ಪಷ್ಟೀಕರಣ ನೀಡಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಹಾಲಿ ಹಣಕಾಸು ವರ್ಷ ಚಾಲ್ತಿಯಲ್ಲಿರುವುದರಿಂದ ಇಂತಿಷ್ಟೇ ಎಂದು ಗುರಿಯನ್ನು ನಿಗದಿಪಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಸ್ಥಳೀಯ ಅಗತ್ಯಗಳಿಗನುಗುಣವಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಷ್ಕೃತ ಕಾರ್ಮಿಕರ ಆಯವ್ಯಯ ಪ್ರಸ್ತಾವನೆಯನ್ನು ಕಳಿಸಿಕೊಡಬಹುದಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಯೋಗ ಚೀಟಿಗಳ ರದ್ದತಿ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಚೀಟಿಗಳ ಪರಿಶೀಲನೆ ನಿರಂತರ ಪ್ರಕ್ರಿಯೆಯಾಗಿದ್ದು, ಆಧಾರ್ ಸಂಖ್ಯೆಯನ್ನು ನಕಲಿಯನ್ನು ಅಳಿಸಿ ಹಾಕುವ ಸಾಧನವನ್ನಾಗಿ ಬಳಸಿಕೊಂಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಕಾರ್ಯವನ್ನು ಮಾಡುತ್ತಿವೆ ಎಂದು ಸ್ಪಷ್ಟೀಕರಣ ನೀಡಿದೆ.
“ನೈಜ ಪರಿಶೀಲನೆಯ ನಂತರ, ಉದ್ಯೋಗ ಚೀಟಿಯೇನಾದರೂ ನಕಲಿಯಾಗಿದ್ದರೆ ಮಾತ್ರ (ತಪ್ಪು ಮಾಹಿತಿಯುಳ್ಳ ಉದ್ಯೋಗ ಚೀಟಿ/ನಕಲಿ ಉದ್ಯೋಗ ಚೀಟಿ/ನಿವಾಸಿಯು ಕೆಲಸ ಮಾಡಲು ಬಯಸದಿರುವುದು/ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕುಟುಂಬವು ಖಾಯಂ ಆಗಿ ಸ್ಥಳಾಂತರಗೊಂಡಿರುವುದು/ಉದ್ಯೋಗ ಚೀಟಿಯಲ್ಲಿ ಓರ್ವ ವ್ಯಕ್ತಿಯ ಹೆಸರಿರುವುದು ಹಾಗೂ ಉದ್ಯೋಗ ಚೀಟಿಯಲ್ಲಿರುವ ವ್ಯಕ್ತಿಗಳು ಮೃತಪಟ್ಟಿರುವುದು) ಉದ್ಯೋಗ ಚೀಟಿಗಳನ್ನು ರದ್ದುಗೊಳಿಸಬಹುದಾಗಿದೆ ಅಥವಾ ಅಳಿಸಿ ಹಾಕಬಹುದಾಗಿದೆ” ಎಂದು ಸಚಿವಾಲಯ ಹೇಳಿದೆ.