ಮಧ್ಯರಾತ್ರಿ ಕಾರ್ಯಾಚರಣೆ: ಅಣೆಕಟ್ಟಿನ ಅರ್ಧ ನೀರು ಬಿಡಿಸಿಕೊಂಡ ಆಂಧ್ರ
Photo: krmb.gov.in
ಹೈದರಾಬಾದ್: ಗುರುವಾರ ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯುವ ಕೆಲ ಗಂಟೆ ಮೊದಲು ಆಂಧ್ರಪ್ರದೇಶ ನಡೆಸಿದ ಕಾರ್ಯಾಚರಣೆಯಲ್ಲಿ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ನಾಗಾರ್ಜುನ ಸಾಗರ ಅಣೆಕಟ್ಟಿನ ನಿಯಂತ್ರಣ ಪಡೆದು, ತನ್ನ ಕಡೆಗೆ ನೀರು ಹರಿಸಿಕೊಂಡ ಘಟನೆ ವರದಿಯಾಗಿದೆ.
ಉಭಯ ರಾಜ್ಯಗಳು 2014ರಲ್ಲಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದ ಈ ವಿಚಾರದಲ್ಲಿ ಪರಸ್ಪರ ವೈಮನಸ್ಯ ಹೊಂದಿವೆ.
ಅಣೆಕಟ್ಟನ್ನು ವಶಪಡಿಸಿಕೊಂಡು ಬ್ಯಾರಿಕೇಡ್ ಹಾಕಿದ ಆಂಧ್ರಪ್ರದೇಶದ ಈ ಕ್ರಮದ ವಿರುದ್ಧ ತೆಲಂಗಾಣ ಸರ್ಕಾರ, ಉಭಯ ರಾಜ್ಯಗಳಿಗೆ ನೀರು ಹಂಚಿಕೆ ಮಾಡುವ ಕೃಷ್ಣಾ ನದಿ ನಿರ್ವಹಣಾ ಮಂಡಳಿ (ಕೆ ಆರ್ ಎಂ ಬಿ)ಗೆ ದೂರು ನೀಡಿದೆ.
ಸುಮಾರು 400 ಮಂದಿ ಆಂಧ್ರ ಪೊಲೀಸರು ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಗುರುವಾರ ಮಧ್ಯರಾತ್ರಿಯ ಬಳಿಕ 1 ಗಂಟೆ ಸುಮಾರಿಗೆ ಅಣೆಕಟ್ಟಿನ ಬಳಿ ಜಮಾಯಿಸಿದರು. ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ತೆಲಂಗಾಣ ಪೊಲೀಸರು ಆಂಧ್ರದ ಈ ಕ್ರಮದಿಂದ ಕಂಗೆಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರ 36 ಗೇಟುಗಳ ಪೈಕಿ ಅರ್ಧದಷ್ಟು ಗೇಟುಗಳನ್ನು ವಶಕ್ಕೆ ಪಡೆದಿದೆ.
ತೆಲಂಗಾಣ ಅಧಿಕಾರಿಗಳು ಹಾಗೂ ನಲಗೊಂಡ ಪೊಲೀಸರು ಅಣೆಕಟ್ಟಿನ ಬಳಿಗೆ ಧಾವಿಸಿದಾಗ, ಆಂಧ್ರದ ಜತೆ ವಾಗ್ವಾದ ಆರಂಭವಾಯಿತು. ಆದರೆ ಸರ್ಕಾರದ ಆದೇಶದ ಅನ್ವಯ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಆಂಧ್ರದ ಅಧಿಕಾರಿಗಳು ಹೇಳಿದಾಗ ತೆಲಂಗಾಣ ಅಧಿಕಾರಿಗಳು ವಾಪಸ್ಸಾದರು.
ಈ ಹಂತದಲ್ಲಿ ರಾಜ್ಯದ ವಿಳಾಸಗಳನ್ನು ಹೊಂದಿದ ಆಧಾರ್ ಕಾರ್ಡ್ ಪ್ರದರ್ಶಿಸಿದ ತೆಲಂಗಾಣದ ವಾಹನಗಳಿಗೆ ಆಂಧ್ರ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆಯೂ ಆಂಧ್ರ ಇಂಥದ್ದೇ ಪ್ರಯತ್ನ ಮಾಡಿತ್ತು ಎಂದು ತೆಲಂಗಾಣ ಆರೋಪಿಸಿದೆ.
ಆಂಧ್ರಪ್ರದೇಶ ಸರ್ಕಾರ 10 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದೆ. ಗೇಟುಗಳಿಗೆ ಪ್ರತ್ಯೇಕ ವಿದ್ಯುತ್ ಲೈನ್ಗಳನ್ನು ಕೂಡಾ ಒದಗಿಸಿದೆ. ಅಂದರೆ ಹಲವು ವಾರಗಳಿಂದ ಆಂಧ್ರ ಇದಕ್ಕೆ ಯೋಜನೆ ರೂಪಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಸಿಸಿಟಿವಿ ಕ್ಯಾಮೆರಾಗಳಿಗೆ ಮತ್ತು ಸ್ವಯಂಚಾಲಿತ ಪ್ರವೇಶದ್ವಾರಕ್ಕೆ ಕೂಡಾ ಆಂಧ್ರ ಹಾನಿ ಮಾಡಿದೆ ಎಂದು ತೆಲಂಗಾಣ ಸಿಎಂ ಕಚೇರಿ ಆಪಾದಿಸಿದೆ.