ಬಹ್ರೈಚ್ : ಚಿರತೆ ದಾಳಿಗೆ ಎಂಟು ವರ್ಷದ ಬಾಲಕಿ ಬಲಿ
ಒಂದು ವರ್ಷದಲ್ಲಿ ಕತರ್ನಿಯಾಘಾಟ್ ಪ್ರದೇಶದಲ್ಲಿ 6 ಮಕ್ಕಳು ಸೇರಿದಂತೆ 7 ಮಂದಿ ಚಿರತೆ ದಾಳಿಗೆ ಬಲಿ!
Photo | deccanherald.com
ಬಹ್ರೈಚ್: ಉತ್ತರಪ್ರದೇಶದ ಬಹ್ರೈಚ್ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ಸಮೀಪದ ಹಳ್ಳಿಯೊಂದರಲ್ಲಿ ಚಿರತೆ ದಾಳಿಗೆ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಿನಿ ಚಿರತೆ ದಾಳಿಗೆ ಮೃತಪಟ್ಟ ಬಾಲಕಿ. ಮಕ್ಕಳ ಜೊತೆ ಹೊಲದಲ್ಲಿ ಆಟವಾಡುತ್ತಿದ್ದಾಗ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದೆ.
ಈ ಕುರಿತು ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್ಒ) ಬಿ ಶಿವ ಶಂಕರ್ ಮಾಹಿತಿ ನೀಡಿದ್ದು, ಬುಧವಾರ ಮಧ್ಯಾಹ್ನ ಶಾಲಿನಿ ಎಂಬ ಬಾಲಕಿ ತನ್ನ ಪೋಷಕರು ಮತ್ತು ಇತರ ಕೆಲ ಮಕ್ಕಳೊಂದಿಗೆ ತಮೋಲಿನ್ ಪುರವಾ ಗ್ರಾಮದ ಹೊಲದಲ್ಲಿದ್ದಾಗ ಸಮೀಪದ ಕಬ್ಬಿನ ಗದ್ದೆಯಿಂದ ಹೊರಬಂದ ಚಿರತೆ ಶಾಲಿನಿ ಮೇಲೆ ದಾಳಿ ಮಾಡಿದೆ. ಈ ವೇಳೆ ಬಾಲಕಿಯ ಕೂಗು ಕೇಳಿ ಫೋಷಕರು ಮತ್ತು ಗ್ರಾಮಸ್ಥರು ಓಡಿ ಬಂದು ಚಿರತೆಯನ್ನು ಓಡಿಸಿದ್ದಾರೆ. ಆದರೆ ಬಾಲಕಿ ಚಿರತೆ ದಾಳಿಯಿಂದ ಮೃತಪಟ್ಟಿದ್ದಾಳೆ. ದುಃಖದಲ್ಲಿರುವ ಕುಟುಂಬಕ್ಕೆ 10,000ರೂ.ಗಳ ತಕ್ಷಣದ ನೆರವು ನೀಡಲಾಗಿದೆ. ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿಯ ನಂತರ ಬಾಲಕಿಯ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಶಂಕರ್ ತಿಳಿಸಿದ್ದಾರೆ.
ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅರಣ್ಯ ಇಲಾಖೆಯು ಚಿರತೆ ಸೆರೆಗೆ ಬೋನು ಹಾಕಿದ್ದು, ಚಿರತೆ ಚಲನವಲನದ ಮೇಲೆ ನಿಗಾ ಇರಿಸಿದೆ. ಗ್ರಾಮಸ್ಥರಿಗೆ ಜಾಗರೂಕರಾಗಿರುವಂತೆ ಸೂಚಿಸಿದೆ.
ಒಂದು ವರ್ಷದಲ್ಲಿ ಕತರ್ನಿಯಾಘಾಟ್ ಪ್ರದೇಶದಲ್ಲಿ 7 ಮಂದಿ ಚಿರತೆ ದಾಳಿಗೆ ಬಲಿ!
ಕಳೆದೊಂದು ವರ್ಷದಿಂದ ಕತರ್ನಿಯಾಘಾಟ್ ಅರಣ್ಯದ ಸಮೀಪದ ಗ್ರಾಮಗಳಲ್ಲಿ ಏಳು ಬಾರಿ ಚಿರತೆ ದಾಳಿ ನಡೆದಿದೆ. 2024ರ ಜನವರಿ 19ರಂದು ಅಯೋಧ್ಯಾ ಪೂರ್ವ ಗ್ರಾಮದ ಆಯಿಶಾ(11)ಚಿರತೆ ದಾಳಿಗೆ ಬಲಿಯಾಗಿದ್ದರು. 2024ರ ಮೇ 1ರಂದು ನಡೆದ ಮತ್ತೊಂದು ಘಟನೆಯಲ್ಲಿ ಧರ್ಮಪುರದ 8 ವರ್ಷದ ಬಾಲಕಿ ಶಮಾ ಚಿರತೆ ದಾಳಿಗೆ ಬಲಿಯಾಗಿದ್ದರು. ಜೂನ್ 13, 2024ರಂದು, ಧರ್ಮಪುರದ ಬಾಲಕ ಶಾಹಿದ್(6) ಕೂಡ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಜುಲೈ 12 2024ರಂದು ಮನೋಹರಪುರದ 13 ವರ್ಷದ ಬಾಲಕ ಅರವಿಂದ್ ಕುಮಾರ್ ಚಿರತೆ ದಾಳಿಗೆ ಬಲಿಯಾಗಿದ್ದರು, ಸೆಪ್ಟೆಂಬರ್ 30, 2024ರಂದು ಧರ್ಮಪುರದ 32 ವರ್ಷದ ಕನ್ಹೈ ಲಾಲ್ ಚಿರತೆ ದಾಳಿಗೆ ಬಲಿಯಾಗಿದ್ದರು. ಇತ್ತೀಚೆಗೆ ನವೆಂಬರ್ 15, 2024ರಂದು ಸೀತಾರಾಮ್ ಪೂರ್ವದ ಐದು ವರ್ಷದ ಬಾಲಕ ಅಭಿನಂದನ್ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಈ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಹೊಲಗಳಿಗೆ ಗುಂಪಾಗಿ ತೆರಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.