ತಮಿಳುನಾಡು | ಕ್ಷೇತ್ರ ಪುನರ್ವಿಂಗಡಣೆ ಕುರಿತ ಸರ್ವಪಕ್ಷಗಳ ಸಭೆ ಬಹಿಷ್ಕರಿಸುವುದಾಗಿ ಘೋಷಿಸಿದ ಬಿಜೆಪಿ

ಎಂ.ಕೆ. ಸ್ಟಾಲಿನ್ | PTI
ಲಕ್ನೋ : ಕ್ಷೇತ್ರ ಪುನರ್ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾರ್ಚ್ 5ರಂದು ಕರೆದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದಾಗಿ ಬಿಜೆಪಿ ಘೋಷಿಸಿದೆ.
2026ರಲ್ಲಿ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆ ಕುರಿತು ಚರ್ಚೆಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು. ಆದರೆ ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ.
ʼಸಭೆಯನ್ನು ಬಹಿಷ್ಕರಿಸುವ ಬಗ್ಗೆ ನಾವು ಕಾರಣಗಳನ್ನು ವಿವರಿಸಿ ಮುಖ್ಯಮಂತ್ರಿಗೆ ವಿವರವಾದ ಪತ್ರವನ್ನು ಕಳುಹಿಸಿದ್ದೇವೆ. ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ನಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದೇವೆ. ತಮಿಳುನಾಡಿನಲ್ಲಿ ಸಂಸದೀಯ ಸ್ಥಾನ ಕಡಿಮೆಯಾಗುತ್ತದೆ ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ನಿಮಗೆ ಈ ಮಾಹಿತಿ ಕೊಟ್ಟವರು ಯಾರು? ಇದಕ್ಕೆ ಸಾಕ್ಷಿಯನ್ನು ನೀಡಿದರೆ ನಮ್ಮ ನಿಲುವನ್ನು ಮರುಪರಿಶೀಲಿಸಲು ನಾವು ಮುಕ್ತರಾಗಿದ್ದೇವೆ ಎಂದು ಬಿಜೆಪಿ ನಾಯಕರೋರ್ವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಜಾರಿಗೊಳಿಸಿದರೆ ನಮ್ಮ ಜನಸಂಖ್ಯೆ ಕಡಿಮೆ ಇರುವುದರಿಂದ ತಮಿಳುನಾಡಿಗೆ 8 ಲೋಕಸಭಾ ಕ್ಷೇತ್ರಗಳು ಕಡಿಮೆಯಾಗಲಿದೆ. ಸಂಸತ್ತಿನಲ್ಲಿ ತಮಿಳುನಾಡು ಪ್ರಾತಿನಿಧ್ಯ ಕಳೆದುಕೊಳ್ಳಲಿದೆ. ಆದ್ದರಿಂದ ಮಾರ್ಚ್ 5ರಂದು ನಡೆಯುವ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸಿ ಒಗ್ಗಟ್ಟಿನಿಂದ ಧ್ವನಿ ಎತ್ತುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಮೊದಲು ಮನವಿ ಮಾಡಿದ್ದರು.