"ಸೋಲಿನ ಮೈತ್ರಿ": ಬಿಜೆಪಿ - ಎಐಎಡಿಎಂಕೆ ಮೈತ್ರಿಗೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ವ್ಯಂಗ್ಯ

ಎಂ.ಕೆ.ಸ್ಟಾಲಿನ್ (PTI)
ಹೊಸದಿಲ್ಲಿ: ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ನಡುವಿನ ಮೈತ್ರಿಯನ್ನು ಸೋಲಿನ ಮೈತ್ರಿ ಎಂದು ಶುಕ್ರವಾರ ವ್ಯಂಗ್ಯವಾಡಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಚೆನ್ನೈನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಪತ್ರಿಕಾಗೋಷ್ಠಿ ಅವರ ಹುದ್ದೆಗೆ ತಕ್ಕುದಾಗಿರಲಿಲ್ಲ ಎಂದು ಟೀಕಿಸಿದ್ದಾರೆ.
ಈ ಕುರಿತು ಡಿಎಂಕೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, "ಎಐಎಡಿಎಂಕೆ-ಬಿಜೆಪಿ ಮೈತ್ರಿಯು ಸೊಲಿನ ಮೈತ್ರಿಯಾಗಿದೆ" ಎಂದು ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಯಾವುದೇ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದೆ, ವಿಫಲಗೊಂಡ ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ಮರುಜೀವ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನೂ ಅವರು ಟೀಕಿಸಿದ್ದಾರೆ. "ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ದೃಢಪಡಿಸುವುದು ಅವರ ಆಯ್ಕೆಯಾಗಿದ್ದರೂ, ಈ ಮೈತ್ರಿಕೂಟವನ್ನು ಯಾಕೆ ರಚಿಸಲಾಯಿತು ಅಥವಾ ಈ ಮೈತ್ರಿಕೂಟ ಯಾವ ಸೈದ್ಧಾಂತಿಕ ಬುನಾದಿಯನ್ನು ಹೊಂದಿರಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಬದಲಿಗೆ ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಮೈತ್ರಿಕೂಟ ರಚಿಸಿದ್ದೇವೆ ಎಂದು ಅವರು ಉಡಾಫೆಯ ಹೇಳಿಕೆ ನೀಡಿದ್ದಾರೆ " ಎಂದೂ ಅವರು ಛೇಡಿಸಿದ್ದಾರೆ.
ಈ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ನೀಟ್, ತ್ರಿಭಾಷಾ ಸೂತ್ರ, ಹಿಂದಿ ಹೇರಿಕೆ, ವಕ್ಫ್ ಕಾಯ್ದೆ ಹಾಗೂ ಮುಂಬರುವ ಕ್ಷೇತ್ರ ಪುನರ್ವಿಂಗಡೆಯಲ್ಲಿ ತಮಿಳುನಾಡಿನ ಸ್ಥಾನಗಳ ಕಡಿತದಂತಹ ಪ್ರಮುಖ ವಿಷಯಗಳ ವಿರುದ್ಧ ಎಐಎಡಿಎಂಕೆ ವ್ಯಕ್ತಪಡಿಸಿದ್ದ ವಿರೋಧವೂ ಸೇರಿದೆಯೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ಶುಕ್ರವಾರ ಅಧಿಕೃತವಾಗಿ ಮರುಜೀವ ನೀಡಲಾಗಿದ್ದು, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯೊಂದಿಗೆ ಎನ್ಡಿಎ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದಾರೆ.