ಮಕ್ಕಾದ ಪವಿತ್ರ ಮಸೀದಿ ಆವರಣದಲ್ಲಿ ʼಮೊಬೈಲ್ ಬಾರ್ಬರ್ ಸೇವೆʼ ಆರಂಭ
Photo | X
ರಿಯಾದ್ : ಮೊದಲ ಬಾರಿಗೆ ಯಾತ್ರಾರ್ಥಿಗಳಿಗೆ ಅನುಕೂಲವನ್ನು ಒದಗಿಸುವ ಉದ್ದೇಶದಿಂದ ಮಕ್ಕಾದ ಪವಿತ್ರ ʼಮಸ್ಜಿದ್ ಅಲ್ ಹರಮ್ʼನ ಆವರಣದಲ್ಲಿ ಸೌದಿ ಅರೇಬಿಯಾ ಸರಕಾರ ʼಕ್ಷೌರ ಅಂಗಡಿʼ(ಮೊಬೈಲ್ ಬಾರ್ಬರ್ ಸೇವೆ) ಪ್ರಾರಂಭಿಸಿದೆ.
ರಮಾಝಾನ್ನಲ್ಲಿ ಉಮ್ರಾ ಯಾತ್ರಿಕರ ಸಂಖ್ಯೆ ಹೆಚ್ಚಳವಾಗಿದೆ. ಈ ಮಧ್ಯೆ ಸೌದಿ ಸರಕಾರ ಈ ಮಹತ್ವದ ಕ್ರಮವನ್ನು ಕೈಗೊಂಡಿದೆ. ಯಾತ್ರಾರ್ಥಿಗಳಿಗೆ ಉಚಿತವಾಗಿ ಈ ಸೇವೆ ಲಭ್ಯವಾಗಲಿದ್ದು, ರಮಝಾನ್ ತಿಂಗಳಲ್ಲಿ ಉಪವಾಸ ನಿರತ ಯಾತ್ರಿಗಳಿಗೆ ಅದರಲ್ಲೂ ವಯಸ್ಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ.
ಮೊಬೈಲ್ ಕ್ಷೌರ ಅಂಗಡಿ ಸೇವೆಯಿಂದ ರಮಝಾನ್ನಲ್ಲಿ ಹೇರ್ ಕಟ್ ಮಾಡಿಸಲು ಯಾತ್ರಿಕರು ದೀರ್ಘ ನಡಿಗೆ ಮತ್ತು ಉದ್ದವಾದ ಸರತಿ ಸಾಲುಗಳಲ್ಲಿ ನಿಲ್ಲುವುದು ತಪ್ಪಲಿದೆ. ಕ್ಷೌರ ಅಂಗಡಿಯಲ್ಲಿ ತರಬೇತಿ ಪಡೆದ ಸಿಬ್ಬಂದಿಗಳಿಂದ ಉತ್ತಮ ಗುಣಮಟ್ಟದ ಸೇವೆಗಳು ಲಭ್ಯವಾಗಲಿದೆ.
ಕ್ಷೌರ ಮಾಡಿಸುವುದು ಉಮ್ರಾದ ಅಂತಿಮ ಹಂತವಾಗಿದೆ. ಸಾಮಾನ್ಯವಾಗಿ 7 ರಿಂದ 10 ಸೌದಿ ರಿಯಲ್ ವರೆಗೆ ಪಾವತಿ ಮಾಡಿ ಯಾತ್ರಿಗಳು ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಉಚಿತ ಸೇವೆ ಲಭ್ಯವಿರುವುದರಿಂದ ಯಾತ್ರಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.