ಮೋದಿಯಿರುವುದು ಅದಾನಿ - ಅಂಬಾನಿಗಾಗಿ; ನಮ್ಮ ಕುಟುಂಬ ಜನರಿಗಾಗಿ ಸೇವೆ ಮಾಡಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ರಾಯ್ಬರೇಲಿ : ಅದಾನಿ ಹಾಗೂ ಅಂಬಾನಿ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಭಿನ್ನವಾಗಿ ನಮ್ಮ ಕುಟುಂಬ ಯಾವಾಗಲೂ ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿದೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ತನ್ನ ಕ್ಷೇತ್ರದ ಮೊದಲ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಕುಟುಂಬ ರಾಯ್ಬರೇಲಿಯ ಜನರೊಂದಿಗೆ ಆಳವಾದ ನಂಟು ಹೊಂದಿರುವುದರಿಂದ ತಾನು ಇಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡು ರಾಹುಲ್ ಗಾಂಧಿ, ಮೋದಿ ಸರಕಾರ ಕೈಕಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಇದು ಎಂಜಿಎನ್ಆರ್ಇಜಿಎ ಅಡಿಯಲ್ಲಿ 24 ವರ್ಷಕ್ಕೆ ಮಂಜೂರಾಗುವ ಹಣಕ್ಕೆ ಸಮಾನವಾಗಿದೆ ಎಂದರು.
ರಾಯ್ಬರೇಲಿಯ ಜನರ ಜೀವನ ಸುಧಾರಿಸಲು ನನ್ನ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ಅವರು ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳು ರೈತರು ಹಾಗೂ ನಿರುದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸಾರ ಮಾಡುತ್ತಿಲ್ಲ. ಬದಲಾಗಿ ಉನ್ನತ ಕೈಗಾರಿಕೋದ್ಯಮಿಗಳ ಕುಟುಂಬಗಳ ವಿವಾಹ ಸಮಾರಂಭಕ್ಕೆ ಪ್ರಾಮುಖ್ಯತೆ ನೀಡುತ್ತಿವೆ ಎಂದು ಅವರು ತಿಳಿಸಿದರು.
‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಬಡ ಕುಟುಂಬಗಳ ಪಟ್ಟಿಯನ್ನು ತಯಾರಿಸಲಾಗುವುದು ಹಾಗೂ ಅಂತಹ ಪ್ರತಿ ಕುಟುಂಬಗಳ ಓರ್ವ ಮಹಿಳೆಯ ಬ್ಯಾಂಕ್ ಖಾತೆಗೆ ವಾರ್ಷಿಕ 1 ಲಕ್ಷ ರೂ. ಅಥವಾ ಮಾಸಿಕ 8,500 ರೂ. ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.
ಇಂಡಿಯಾ ಮೈತ್ರಿಕೂಟ ಸರಕಾರ ಸಣ್ಣ ರೈತರ ಸಾಲಗಳನ್ನು ಮನ್ನಾ ಮಾಡಲಿದೆ ಹಾಗೂ ಅವರಿಗೆ ನೀಡಲಾಗುವ ಸಾಮಾನ್ಯ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಲಿದೆ ಎಂದು ಅವರು ಹೇಳಿದರು.
ರಕ್ಷಣಾ ಪಡೆಗಳಲ್ಲಿ ಅಲ್ಪಾವಧಿ ನೇಮಕಾತಿಯ ‘ಅಗ್ನಿವೀರ್ ಯೋಜನೆ’ಯನ್ನು ರದ್ದುಗೊಳಿಸಲಾಗುವುದು ಹಾಗೂ ಯುವಜನತೆಗೆ ಸೇನಾ ಪಡೆಗಳಲ್ಲಿ ಖಾಯಂ ಉದ್ಯೋಗವನ್ನು ಪಿಂಚಣಿ ಯೋಜನೆಯೊಂದಿಗೆ ನೀಡಲಾಗುವುದು ಎಂದು ರಾಹುಲ್ ಗಾಂಧಿ ತಿಳಿಸಿದರು.