ಮೋದಿ ಸರಕಾರಕ್ಕೆ ಮಾತುಕತೆ ನಡೆಸುವ ಇಚ್ಛೆಯಿಲ್ಲ ; ರವಿವಾರ 101 ರೈತರಿಂದ ದಿಲ್ಲಿ ಚಲೊ : ಪಂಧೇರ್
ಸರವಣ್ ಸಿಂಗ್ ಪಂಧೇರ್ | PC : PTI
ಚಂಡೀಗಢ: ತಮ್ಮ ಸಮಸ್ಯೆಗಳನ್ನು ಆಲಿಸಲು ಮಾತುಕತೆ ನಡೆಸುವ ಕುರಿತು ಕೇಂದ್ರ ಸರಕಾರದಿಂದ ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ. ಹೀಗಾಗಿ, ರವಿವಾರ 101 ರೈತರ ಗುಂಪು ಮತ್ತೆ ದಿಲ್ಲಿಯತ್ತ ಮೆರವಣಿಗೆ ನಡೆಸಲಿದೆ ಎಂದು ಶನಿವಾರ ಪಂಜಾಬ್ ರೈತ ನಾಯಕ ಸರವಣ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.
ಶುಕ್ರವಾರ, ಪಂಜಾಬ್-ಹರ್ಯಾಣ ಗಡಿಯ ಬಳಿ ಪ್ರತಿಭಟನಾನಿರತ ರೈತರನ್ನು ತಡೆದ ಭದ್ರತಾ ಸಿಬ್ಬಂದಿಗಳು, ಅವರ ಮೇಲೆ ಅಶ್ರುವಾಯು ಶೆಲ್ ಪ್ರಯೋಗಿಸಿದ್ದರಿಂದ ಕೆಲ ರೈತರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ದಿಲ್ಲಿ ಚಲೊ ಮೆರವಣಿಗೆಯನ್ನು ರೈತರು ಅಮಾನತುಗೊಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಂಜಾಬ್-ಹರ್ಯಾಣದ ಶಂಭು ಗಡಿಯ ಬಳಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪಂಧೇರ್, 16 ರೈತರು ಭದ್ರತಾ ಸಿಬ್ಬಂದಿಗಳ ಅಶ್ರುವಾಯು ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದು, ಈ ಪೈಕಿ ಓರ್ವ ರೈತ ತಮ್ಮ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯಗೊಂಡಿರುವ ರೈತರನ್ನು ಹೊರತುಪಡಿಸಿ, ಉಳಿದ ರೈತರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿರುವ ಪಂಧೇರ್, “ಮಾತುಕತೆ ನಡೆಸುವ ಕುರಿತು ನಾವು ಕೇಂದ್ರ ಸರಕಾರದಿಂದ ಯಾವುದೇ ಸಂದೇಶವನ್ನು ಸ್ವೀಕರಿಸಿಲ್ಲ. ನರೇಂದ್ರ ಮೋದಿ ಸರಕಾರ ಮಾತುಕತೆ ನಡೆಸುವ ಯಾವುದೇ ಇಚ್ಛೆ ಹೊಂದಿಲ್ಲ” ಎಂದೂ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಈಗಾಗಲೇ ರಾಷ್ಟ್ರ ರಾಜಧಾನಿಯತ್ತ ಮತ್ತೆ 101 ರೈತರ ಜಾಥಾವನ್ನು ರವಿವಾರ ಮಧ್ಯಾಹ್ನ ಶಾಂತಿಯುತವಾಗಿ ಪುನಾರಂಭಿಸಲು ನಿರ್ಧರಿಸಿವೆ ಎಂದೂ ಅವರು ಹೇಳಿದ್ದಾರೆ.