ಟ್ರಂಪ್ ಜೊತೆಗಿನ ಮಾತುಕತೆ ವೇಳೆ ಅದಾನಿ ವಿಷಯ ಪ್ರಸ್ತಾಪಿಸಿಲ್ಲ: ಪ್ರಧಾನಿ ಮೋದಿ

Photo credit: X/@narendramodi
ಹೊಸದಿಲ್ಲಿ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯ ವೇಳೆ ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಅಮೆರಿಕ ಸರಕಾರ ಹೊರಿಸಿರುವ ಲಂಚದ ಆರೋಪದ ಬಗ್ಗೆ ಚರ್ಚಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟ್ರಂಪ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೊದಲನೆಯದಾಗಿ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಮತ್ತು ನಮ್ಮ ಸಂಸ್ಕೃತಿ ಮತ್ತು ನಮ್ಮ ಚಿಂತನೆಯ ತತ್ವವೆಂದರೆ, 'ವಸುಧೈವ ಕುಟುಂಬಕಂ', ಅಂದರೆ ಮೂಲತಃ ಇಡೀ ಜಗತ್ತೇ ಒಂದು ಕುಟುಂಬ. ಅದಾನಿ ವಿರುದ್ಧದ ಆರೋಪಗಳು ವೈಯಕ್ತಿಕ ವಿಷಯ ಮತ್ತು ಅಂತಹ ವೈಯಕ್ತಿಕ ವಿಷಯವನ್ನು ಟ್ರಂಪ್ ಜೊತೆಗಿನ ಚರ್ಚೆಯ ವೇಳೆ ಪ್ರಸ್ತಾಪಿಸಿಲ್ಲ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ದೃಷ್ಟಿಯಿಂದ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಗೌತಮ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ನಿರ್ದೇಶಕರಾಗಿರುವ ಅವರ ಸೋದರಳಿಯ ಸಾಗರ್ ಸೇರಿದಂತೆ ಇತರ 7 ಆರೋಪಿಗಳು 2020 ಮತ್ತು 2024ರ ನಡುವೆ ಸೌರ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 265 ಮಿಲಿಯನ್ ಡಾಲರ್ ಲಂಚ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅದಾನಿ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.