ಮೋದಿ, ಶಾ ಅವರನ್ನು ಕುಟುಕಿದರೇ ಆದಿತ್ಯನಾಥ್?
ಅತಿ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದ ಸಿಎಂ ಆದಿತ್ಯನಾಥ್ ► ಸೋಲಿನ ಹೊಣೆ ತನ್ನ ತಲೆಗೆ ಕಟ್ಟುವ ಪ್ರಯತ್ನಕ್ಕೆ ಯುಪಿ ಸಿಎಂ ತಿರುಗೇಟು?
ಅಮಿತ್ ಶಾ , ಆದಿತ್ಯನಾಥ್, ನರೇಂದ್ರ ಮೋದಿ | PC : PTI
ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಿಸಿ ಬಿಜೆಪಿಯನ್ನು ಬಾಧಿಸುತ್ತಲೇ ಇದೆ. ಕೇಂದ್ರದಲ್ಲಿ ಬಿಜೆಪಿ ಬೇರೆ ಪಕ್ಷಗಳ ಆಸರೆಯಲ್ಲಿ ಸರ್ಕಾರ ರಚಿಸಬೇಕಾದ ಸ್ಥಿತಿ ಬಂದಿರುವುದಕ್ಕೆ ಅದು ಯುಪಿಯಲ್ಲಿ ಕಂಡ ದೊಡ್ಡ ಹಿನ್ನಡೆ ಕೂಡ ಕಾರಣ.
ಯುಪಿಯಲ್ಲಿನ ಹಿನ್ನಡೆಯ ಹೊಣೆಯನ್ನು ಸಿಎಂ ಆದಿತ್ಯನಾಥ್ ತಲೆಗೆ ಕಟ್ಟುವ ಪರೋಕ್ಷ ನಡೆಗಳೂ ಮೋದಿ, ಶಾ ನೇತೃತ್ವದ ಬಿಜೆಪಿಯಲ್ಲಿ ಕಾಣಿಸದೇ ಇಲ್ಲ. ಆದರೆ ಆ ಎಲ್ಲ ಹೊಣೆಯನ್ನು ಅಷ್ಟೇ ಪರೋಕ್ಷವಾಗಿ ಮೋದಿ ಮತ್ತು ಶಾ ಕಡೆಗೇ ತಿರುಗಿಸುವ ಚಾಣಾಕ್ಷತನವನ್ನು ಆದಿತ್ಯನಾಥ್ ತೋರಿಸುತ್ತಿದ್ದಾರೆಯೆ?
ಇಂಥದೊಂದು ಅನುಮಾನ ಮೂಡುವುದಕ್ಕೆ ಕಾರಣ, ಅವರ ಒಂದು ಹೇಳಿಕೆ. ಬಿಜೆಪಿಗೆ ಹಿನ್ನಡೆಯಾಗಿರುವುದು ಅತಿಯಾದ ಆತ್ಮವಿಶ್ವಾಸದಿಂದಾಗಿ ಎಂದು ಸಿಎಂ ಆದಿತ್ಯನಾಥ್ ಹೇಳಿದ್ಧಾರೆ.
ಈ ಮೂಲಕ ಅವರು ಮೋದಿ ಮತ್ತು ಶಾ ಅವರಿಗೇ ಕುಟುಕಿದರಾ? ಬಹುಶಃ ಹೌದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಚಾರ್ ಸೌ ಪಾರ್ ಆಗಲಿದೆ ಎಂದು ಮೋದಿ ಹಾಗು ಶಾ ಜೋಡಿ ಪ್ರಚಾರ ನಡೆಸಿತ್ತು. ಇಡೀ ವಿಪಕ್ಷ ಒಕ್ಕೂಟಕ್ಕೆ ರಾಹುಲ್ ಗಾಂಧಿಯ ವಯಸ್ಸಿನಷ್ಟೂ ಸೀಟು ಸಿಗೋದಿಲ್ಲ ಎಂದು ಮೋದಿ ತಮಾಷೆ ಮಾಡಿದ್ದರು.
ಆದರೆ ಲೋಕಸಭಾ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಅಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಪ್ರಚಂಡ ಬಹುಮತದೊಂದಿಗೆ ಸರಕಾರ ನಡೆಸುತ್ತಿದ್ದ ಬಿಜೆಪಿಗೆ ಮಿತ್ರಪಕ್ಷಗಳ ಜೊತೆ ಸೇರಿ ಸರಕಾರ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿಯೊಂದಕ್ಕೂ ಚಂದ್ರಬಾಬು ನಾಯ್ಡು ಹಾಗು ನಿತೀಶ್ ಕುಮಾರ್ ಅವರ ಒಪ್ಪಿಗೆ ಪಡೆದೇ ಮುಂದುವರಿಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಪರಿಸ್ಥಿತಿ ಬರುವುದರ ಹಿಂದಿನ ಮುಖ್ಯ ಕಾರಣ ಪಕ್ಷಕ್ಕೆ ಯುಪಿಯಲ್ಲಿ ಉಂಟಾದ ಮುಖಭಂಗ. ಅಯೋಧ್ಯೆ ಇರುವ ಫೈಝಬಾದ್ ನಲ್ಲೂ ಬಿಜೆಪಿ ಸೋತಿದೆ. ವಾರಣಾಸಿಯಿಂದ ಪ್ರಧಾನಿ ಮೋದಿ ಗೆದ್ದರೂ ಗೆಲುವಿನ ಅಂತರ ಗಣನೀಯವಾಗಿ ಬಿದ್ದು ಹೋಗಿರುವುದು ಕೂಡ ಎದ್ದು ಕಾಣಿಸುವ ವಾಸ್ತವ.
ಅಮೇಥಿಯಿಂದ ಸ್ಮೃತಿ ಇರಾನಿ ಈವರೆಗೆ ಒಂದೇ ಒಂದು ಚುನಾವಣೆಯಲ್ಲೂ ಸ್ಪರ್ಧಿಸಿರದ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತನ ವಿರುದ್ಧ ಸೋಲನುಭವಿಸಿದರು. 8 ಬಾರಿ ಸಂಸದರಾಗಿದ್ದ ಮನೇಕಾ ಗಾಂಧಿ ಸುಲ್ತಾನ್ಪುರ ಕ್ಷೇತ್ರದಿಂದ ಸೋಲು ಕಂಡರು. ಅಯೋಧ್ಯೆ, ವಾರಣಾಸಿ ಸುತ್ತಮುತ್ತಲ ಹಲವು ಕ್ಷೇತ್ರಗಳಲ್ಲೂ ಬಿಜೆಪಿ ಮುಗ್ಗರಿಸಿದೆ.
ಇದೀಗ ಈ ಪರಿಸ್ಥಿತಿಗೆ ಕಾರಣ ಏನು ಎಂದು ಸ್ವತಃ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೊಂಡಿದ್ದಾರೆ .ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಬಿಜೆಪಿಗೆ ಹಿನ್ನಡೆಯುಂಟಾಯಿತು ಎಂದು ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯುಂಟಾದ ನಂತರ ಪ್ರಪ್ರಥಮ ಬಾರಿಗೆ ನಡೆದ ಉತ್ತರ ಪ್ರದೇಶ ಬಿಜೆಪಿ ಘಟಕದ ಪ್ರಮುಖ ಸಭೆಯೊಂದರಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮೋದಿ ಅವರ ನಾಯಕತ್ವದಡಿ ಬಿಜೆಪಿ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳನ್ನು ನಿರಂತರವಾಗಿ ಒತ್ತಡದಲ್ಲಿ ಸಿಲುಕಿಸುತ್ತಲೇ ಬಂದಿದೆ. ಅದರ ಪರಿಣಾಮವಾಗಿ 2017 ಹಾಗೂ 2022ರ ವಿಧಾನಸಭಾ ಚುನಾವಣೆ ಹಾಗೂ 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಯಶಸ್ಸು ಗಳಿಸಿತ್ತು. 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಈ ಹಿಂದಿನ ಪ್ರಮಾಣದ ಮತ ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಮತಗಳ ವರ್ಗಾವಣೆ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಪಕ್ಷದ ನಿರೀಕ್ಷೆಗೆ ಘಾಸಿಯುಂಟಾಗಿದೆ ಎಂದು ಅವರು ಹೇಳಿದ್ದಾರೆ.
ಹೀಗೆ ಮೋದಿಯನ್ನು ಹೊಗಳಿದಂತೆ ಮಾಡುತ್ತಲೇ, ಆದಿತ್ಯನಾಥ್ ಅವರು ಬಾಣವನ್ನು ಮಾತ್ರ ಮೋದಿ ಕಡೆಗೇ ತಿರುಗಿಸಿದ ಹಾಗಿದೆ. ಬಿಜೆಪಿ ರಾಷ್ಟ್ರೀಯವಾದಿ ದೃಷ್ಟಿಕೋನ ಹೊಂದಿದೆ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮೀಸಲಾತಿ ರದ್ದು ಮಾಡಲು ಬಯಸುತ್ತಿದೆ ಎಂದು ಇಂಡಿಯಾ ಒಕ್ಕೂಟದ ನಾಯಕರು ವಾಗ್ದಾಳಿ ನಡೆಸಿದ್ದರು. ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ತಕ್ಷಣ ವದಂತಿಗಳನ್ನು ತಳ್ಳಿಹಾಕಬೇಕು, ಪರಿಶಿಷ್ಟ ಜಾತಿಯ ಮಹಾಪುರುಷರ ಬಗ್ಗೆ ಬಿಜೆಪಿಯ ಅಭಿಪ್ರಾಯಗಳ ಬಗ್ಗೆ ಮಾತನಾಡಬೇಕು. 2019ರಲ್ಲಿ ನಾವು ರಾಜ್ಯದಲ್ಲಿ ದೊಡ್ಡ ಮೈತ್ರಿಯನ್ನು ಸೋಲಿಸಿದ್ದೇವೆ ಎಂದು ಆದಿತ್ಯನಾಥ್ ಹೇಳಿದರು.
ನಾವು ಜಾತಿ, ಧರ್ಮ ಅಥವಾ ಪಂಥದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಎಂಬತ್ತು ಕೋಟಿ ಜನರಿಗೆ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಉಚಿತ ಪಡಿತರ ಸಿಗುತ್ತಿಲ್ಲ ಎಂದು ಯಥಾ ಪ್ರಕಾರ ಸಂಘ ಪರಿವಾರವನ್ನು ಸಮರ್ಥಿಸಿಕೊಳ್ಳುವ ಯತ್ನವನ್ನೂ ಮುಂದುವರಿಸಿದ್ದಾರೆ ಆದಿತ್ಯನಾಥ್. ಈ ಹಿಂದೆ ಹಲವು ಹಿರಿಯ ಆರೆಸ್ಸೆಸ್ ನಾಯಕರೂ ಬಿಜೆಪಿ ಸೋಲಿಗೆ ಅತಿಯಾದ ಆತ್ಮವಿಶಾಸ ಮತ್ತು ಅಹಂಕಾರವೇ ಕಾರಣ ಎಂದು ಹೇಳಿದ್ದರು.
ಈ ಹಿನ್ನೆಲೆಯಿಂದಲೂ ಆದಿತ್ಯನಾಥ್ ಹೇಳಿಕೆ, ಮೋದಿ ಮತ್ತು ಶಾ ಇಬ್ಬರನ್ನೂ ತಿವಿಯುವ ಯತ್ನದಂತೆ ಕಾಣಿಸುತ್ತಿದೆ. ಏಳು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶದಲ್ಲಿ ಎನ್ಡಿಎ ನಿರಾಶಾದಾಯಕ ಪ್ರದರ್ಶನ ನೀಡಿರುವ ಮರುದಿನವೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಗೆಲುವು ಸಾಧಿಸಿದ್ದರೆ, ಬಿಜೆಪಿ ಕೇವಲ 2 ಮತ್ತು ಪಕ್ಷೇತರರು ಒಂದು ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯ ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರವೇ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಪಾಲಿಗೆ ಮತ್ತೂ ಒಂದು ಅಗ್ನಿಪರೀಕ್ಷೆ ಕಾದಿದೆ.