ನೀವು ಹಿಮಾಲಯಕ್ಕೆ ಹೋಗುತ್ತಿದ್ದೀರಾ? : ರೇಖಾ ಗುಪ್ತ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ಗೆ ಮೋದಿ ಪ್ರಶ್ನೆ
ಕಾರ್ಯಕ್ರಮಕ್ಕೆ ಕೇಸರಿ ಉಡುಪು ಧರಿಸಿ ಬಂದಿದ್ದ ಪವನ್ ಕಲ್ಯಾಣ್

Photo | PTI
ಹೊಸದಿಲ್ಲಿ : ದಿಲ್ಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕೇಸರಿ ವಸ್ತ್ರ ಧರಿಸಿರುವುದನ್ನು ನೋಡಿ ನೀವು ಹಿಮಾಲಯಕ್ಕೆ ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ರಾಮಲೀಲಾ ಮೈದಾನದಲ್ಲಿ ನಡೆದ ರೇಖಾ ಗುಪ್ತ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪವನ್ ಕಲ್ಯಾಣ್ ಅವರು ಕೇಸರಿ ಬಣ್ಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಅವರು ಧರಿಸಿರುವ ಉಡುಪು ಎಲ್ಲರ ಗಮನ ಸೆಳೆದಿತ್ತು.
ಪವನ್ ಕಲ್ಯಾಣ್ ಅವರನ್ನು ನೋಡಿದ ಪ್ರಧಾನಿ ಮೋದಿ ನಗುತ್ತಾ, ನೀವು ಹಿಮಾಲಯಕ್ಕೆ ಹೋಗುತ್ತಿದ್ದೀರಾ? ಎಂದು ತಮಾಷೆಯಾಗಿ ಕೇಳಿದರು. ಈ ವೇಳೆ ಅಲ್ಲಿದ್ದ ಇತರರು ನಗೆಯನ್ನು ಬೀರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್, ʼಪ್ರಧಾನಿ ಯಾವಾಗಲೂ ನನ್ನೊಂದಿಗೆ ತಮಾಷೆ ಮಾಡುತ್ತಾರೆ. ಇಂದು ಅವರು ನನ್ನ ಉಡುಗೆಯನ್ನು ನೋಡಿದರು ಮತ್ತು ನಾನು ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋಗುತ್ತಿದ್ದೇನೆಯೇʼ ಎಂದು ಕೇಳಿದರು ಎಂದು ಹೇಳಿದ್ದಾರೆ.
ರೇಖಾ ಗುಪ್ತ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ನಾಯಕರು ಮತ್ತು ಎನ್ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸಿದ್ದರು.