ಮೋದಿಯವರ ದ್ವೇಷ ಭಾಷಣ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ: ರಾಹುಲ್ ಗಾಂಧಿ
Photo: PTI
ಹೊಸದಿಲ್ಲಿ : “ಮೊದಲ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿರಾಸೆಯಾಗಿದೆ. ಅವರು ಮತ್ತಷ್ಟು ಸುಳ್ಳುಗಳನ್ನು ಹೇಳತೊಡಗಿದ್ದಾರೆ. ಸಾರ್ವಜನಿಕರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಬಯಸಿದ್ದಾರೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಕಾಂಗ್ರೆಸ್ನ ‘ಕ್ರಾಂತಿಕಾರಿ ಪ್ರಣಾಳಿಕೆ’ಗೆ ಸಿಗುತ್ತಿರುವ ಅಪಾರ ಬೆಂಬಲದ ಬಗ್ಗೆ ಟ್ರೆಂಡ್ಗಳು ಬರಲಾರಂಭಿಸಿವೆ. ದೇಶವು ಈಗ ತನ್ನ ಸಮಸ್ಯೆಗಳ ಮೇಲೆ ಮತ ಚಲಾಯಿಸುತ್ತದೆ, ಉದ್ಯೋಗ, ಕುಟುಂಬ ಮತ್ತು ಭವಿಷ್ಯಕ್ಕಾಗಿ ಮತ ಚಲಾಯಿಸುತ್ತದೆ. ಭಾರತ ದಾರಿ ತಪ್ಪುವುದಿಲ್ಲ” ಎಂದು ತಮ್ಮ ಪೋಸ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ವಿತರಿಸುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ರವಾಗಿದೆ.
ಪ್ರಧಾನಿ ಮೋದಿಯವರ ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, “ಮೊದಲ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭರವಸೆ ಕಳೆದುಕೊಂಡಿದ್ದಾರೆ. ಇದು ಹತಾಶೆಯ ಪರಾಕಾಷ್ಠೆ. ತಮ್ಮ ಸುಳ್ಳುಗಳ ಮೂಲಕ ಹಿಂದೂ-ಮುಸ್ಲಿಮರನ್ನು ಮತ್ತೆ ವಿಭಜಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.