ಹಣ ದುರ್ಬಳಕೆ ಆರೋಪ: ಫಾರೂಕ್ ಅಬ್ದುಲ್ಲಾಗೆ ಈ.ಡಿ. ಸಮನ್ಸ್
Photo: PTI
ಹೊಸದಿಲ್ಲಿ: ಹಣ ದುರ್ಬಳಕೆ ಪ್ರಕರಣ ಆರೋಪದಲ್ಲಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಕಾನೂನು ಜಾರಿ ನಿರ್ದೇಶನಾಲಯ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರಿಗೆ ಸಮನ್ಸ್ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 86 ವರ್ಷದ ಹಿರಿಯ ಮುಖಂಡ ಫಾರೂಕ್ ಅಬ್ದುಲ್ಲಾರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ತಿಳಿದುಬಂದಿದೆ.
ಶ್ರೀನಗರ ಕ್ಷೇತ್ರದ ಸಂಸದರೂ ಆಗಿರುವ ಅವರ ವಿರುದ್ಧ 2022ರಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿತ್ತು.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಣವನ್ನು ಜೆಕೆಸಿಎ ಪದಾಧಿಕಾರಿಗಳು ಸೇರಿದಂತೆ ಸಂಬಂಧಪಡದ ವ್ಯಕ್ತಿಗಳ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಿದ ಸಿಬಿಐ 2018ರಲ್ಲಿ ಸಲ್ಲಿಸಿದ ಆರೋಪಟ್ಟಿಯ ಆಧಾರದಲ್ಲಿ ಈ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿತ್ತು.
ಕಾನೂನು ಜಾರಿ ನಿರ್ದೇಶನಾಲಯದ ಶ್ರೀನಗರ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿದೆ.