2023ರಲ್ಲಿ 2.16 ಲಕ್ಷಕ್ಕೂ ಅಧಿಕ ಭಾರತೀಯರಿಂದ ಪೌರತ್ವ ತ್ಯಾಗ : ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕಳೆದ ವರ್ಷ 2.16 ಲಕ್ಷ ಕ್ಕೂ ಅಧಿಕ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.
ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಆಪ್ ಸಂಸದ ರಾಘವ ಛಡ್ಡಾ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರು.
ಕಳೆದ ಐದು ವರ್ಷಗಳಲ್ಲಿ ತಮ್ಮ ಪೌರತ್ವ ತ್ಯಜಿಸಿದ ಭಾರತೀಯರ ವಿವರಗಳನ್ನು ಒದಗಿಸುವಂತೆ ಛಡ್ಡಾ ಸರಕಾರವನ್ನು ಕೋರಿದ್ದರು.
2022ರಲ್ಲಿ 2,25,620, 2021ರಲ್ಲಿ 1,63,370, 2020ರಲ್ಲಿ 85,256 ಮತ್ತು 2019ರಲ್ಲಿ 1,44,017 ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಪೌರತ್ವ ತ್ಯಾಗದಿಂದಾಗಿ ಹಣಕಾಸು ಮತ್ತು ಬೌದ್ಧಿಕ ಹೊರಹರಿವು ಹಾಗೂ ದೇಶಕ್ಕೆ ಉಂಟಾಗುವ ನಷ್ಟವನ್ನು ನಿರ್ಧರಿಸಲು ಸರಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆಯೂ ಛಡ್ಡಾ ಕೇಳಿದ್ದರು.
ಜ್ಞಾನ ಆರ್ಥಿಕತೆಯ ಈ ಯುಗದಲ್ಲಿ ಜಾಗತಿಕ ಉದ್ಯೋಗ ಸ್ಥಳದ ಸಾಮರ್ಥ್ಯವನ್ನು ಸರಕಾರವು ಗುರುತಿಸಿದೆ ಎಂದು ಹೇಳಿದ ಸಿಂಗ್, ಇದು ವಿದೇಶಗಳಲ್ಲಿಯ ಭಾರತೀಯ ಸಮುದಾಯದೊಂದಿಗೆ ಅದರ ತೊಡಗಿಕೊಳ್ಳುವಿಕೆಯಲ್ಲಿ ಪರಿವರ್ತನೀಯ ಬದಲಾವಣೆಯನ್ನೂ ತಂದಿದೆ ಎಂದು ತಿಳಿಸಿದರು.
ಯಶಸ್ವಿ, ಸಮೃದ್ಧ ಮತ್ತು ಪ್ರಭಾವಿ ಭಾರತೀಯ ಸಮುದಾಯವು ಭಾರತಕ್ಕೆ ಒಂದು ಆಸ್ತಿಯಾಗಿದೆ ಎಂದು ಅವರು ಹೇಳಿದರು.
ಸಿಂಗ್ ಅವರ ಲಿಖಿತ ಉತ್ತರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು, ಉನ್ನತ ಕೌಶಲ್ಯ ಮತ್ತು ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತೀಯರ ವಲಸೆಯು ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ತೆರಿಗೆ ಆದಾಯದ ಬುನಾದಿಯನ್ನು ಗಂಭೀರವಾಗಿ ಕುಗ್ಗಿಸುವ ಆರ್ಥಿಕ ವಿಡಂಬನೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸರಕಾರವೇ ಒದಗಿಸಿರುವ ದತ್ತಾಂಶಗಳ ಪ್ರಕಾರ 2023ರಲ್ಲಿ 2.16 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದು, ಇದು 2011ರಲ್ಲಿ ಪೌರತ್ವ ತೊರೆದಿದ್ದ 1,23,000 ಭಾರತೀಯರಿಗೆ ಹೋಲಿಸಿದರೆ ಹೆಚ್ಚುಕಡಿಮೆ ದುಪ್ಪಟ್ಟಾಗಿದೆ ಎಂದು ತಿಳಿಸಿರುವ ರಮೇಶ್, ತಮ್ಮ ಪೌರತ್ವವನ್ನು ತ್ಯಜಿಸಿದ ಹೆಚ್ಚಿನ ಭಾರತೀಯರು ಹೆಚ್ಚು ಕೌಶಲ್ಯವಂತರು ಮತ್ತು ವಿದ್ಯಾವಂತರಾಗಿದ್ದಾರೆ. ದೇಶದಲ್ಲಿ ನುರಿತ ಕಾರ್ಮಿಕರ ಪೂರೈಕೆ ಕೊರತೆಯಿರುವ ಸಮಯದಲ್ಲಿ ಅವರು ದೇಶವನ್ನು ತೊರೆಯುತ್ತಿರುವುದು ನಮ್ಮ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ ಎಂದಿದ್ದಾರೆ.
ಕಳೆದ ಜೂನ್ನಲ್ಲಿ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ ಆ್ಯಂಡ್ ಪಾರ್ಟನರ್ಸ್ ತನ್ನ ವರದಿಯಲ್ಲಿ, 2024ರಲ್ಲಿ ಸುಮಾರು 4,300 ಭಾರತೀಯ ಕೋಟ್ಯಾಧೀಶರು ದೇಶವನ್ನು ತೊರೆಯುವ ನಿರೀಕ್ಷೆಯಿದೆ ಎಂದು ಹೇಳಿತ್ತು.