2022-23ರ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ನರೇಗಾ ಉದ್ಯೋಗ ಚೀಟಿ ರದ್ದು: ಕೇಂದ್ರ ಸರ್ಕಾರ
ಹೊಸ ದಿಲ್ಲಿ: 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತ್ರಿ ಕಾಯ್ದೆಯಡಿ ವಿತರಿಸಲಾಗಿರುವ ಐದು ಕೋಟಿಗೂ ಹೆಚ್ಚು ಉದ್ಯೋಗ ಚೀಟಿಗಳನ್ನು ರದ್ದುಗೊಳಿಸಲಾಗಿದ್ದು, 2021-22ರ ಅವಧಿಗೆ ಹೋಲಿಸಿದರೆ ಈ ರದ್ದತಿಯ ಪ್ರಮಾಣವು ಶೇ. 247ರಷ್ಟು ಅಧಿಕ ಎಂದು ಮಂಗಳವಾರ ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಲಿಖಿತ ಉತ್ತರ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, 2021-22ರ ಸಾಲಿನಲ್ಲಿ 1,49,51,247 ನರೇಗಾ ಉದ್ಯೋಗ ಚೀಟಿಗಳು ರದ್ದಾಗಿದ್ದರೆ, 2022-23ರ ಸಾಲಿನಲ್ಲಿ 5,18,91,168 ಉದ್ಯೋಗ ಚೀಟಿಗಳು ರದ್ದಾಗಿವೆ ಎಂದು ತಿಳಿಸಿದ್ದಾರೆ.
ಈ ಪೈಕಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅತ್ಯಧಿಕ ರದ್ದತಿ ಕಂಡು ಬಂದಿದೆ. 2021-22ರ ಸಾಲಿನಲ್ಲಿ ಪಶ್ಚಿಮ ಬಂಗಾಳದಲ್ಲಿ 1,57,309 ಉದ್ಯೋಗ ಚೀಟಿಗಳು ರದ್ದಾಗಿದ್ದರೆ, 2022-23ರ ಸಾಲಿನಲ್ಲಿ ಈ ಸಂಖ್ಯೆಯು ಶೇ. 5,000ದಷ್ಟು ಹೆಚ್ಚಳಗೊಂಡು, 83,36,115 ಉದ್ಯೋಗ ಚೀಟಿಗಳು ರದ್ದಾಗಿವೆ. 2021-22ರ ಸಾಲಿನಲ್ಲಿ ಆಂಧ್ರಪ್ರದೇಶದಲ್ಲಿ 6,25,514 ಉದ್ಯೋಗ ಚೀಟಿಗಳು ರದ್ದಾಗಿದ್ದರೆ, ಈ ಪ್ರಮಾಣವು 2022-23ರ ಸಾಲಿನಲ್ಲಿ ಶೇ. 1,147ರಷ್ಟು ಏರಿಕೆಯಾಗಿ 78,05,569 ಉದ್ಯೋಗ ಚೀಟಿಗಳು ರದ್ದಾಗಿವೆ.
ಅದೇ ರೀತಿ, 2021-22ರ ಸಾಲಿನಲ್ಲಿ ತೆಲಂಗಾಣದಲ್ಲಿ 61,278 ಉದ್ಯೋಗ ಚೀಟಿಗಳು ರದ್ದಾಗಿದ್ದರೆ, 2022-23ರ ಸಾಲಿನಲ್ಲಿ ಶೇ. 2,727ರಷ್ಟು ಹೆಚ್ಚಳವಾಗಿ 17,32,936 ಉದ್ಯೋಗ ಚೀಟಿಗಳು ರದ್ದಾಗಿವೆ. 2021-22ರ ಸಾಲಿನಲ್ಲಿ ಗುಜರಾತ್‌ನಲ್ಲಿ 1,43,202 ಉದ್ಯೋಗ ಚೀಟಿಗಳು ರದ್ದಾಗಿದ್ದರೆ, 2022-23ರ ಸಾಲಿನಲ್ಲಿ ಶೇ. 200ರಷ್ಟು ಏರಿಕೆ ಕಂಡು, 4,30,404 ಉದ್ಯೋಗ ಚೀಟಿಗಳು ರದ್ದಾಗಿವೆ.
ಉದ್ಯೋಗ ಚೀಟಿಗಳನ್ನು ನಕಲಿ, ದ್ವಿಪ್ರತಿ, ಜನರಿಗೆ ಇನ್ನು ಉದ್ಯೋಗ ಮಾಡಲು ಇಚ್ಛೆ ಇಲ್ಲದಿರುವುದು, ಗ್ರಾಮ ಪಂಚಾಯಿತಿಯಿಂದ ಕುಟುಂಬವು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಅಥವಾ ಉದ್ಯೋಗ ಚೀಟಿದಾರನು ಮೃತಪಟ್ಟಿರುವಂತಹ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ ಎಂದು ತಮ್ಮ ಉತ್ತರದಲ್ಲಿ ಸಿಂಗ್ ತಿಳಿಸಿದ್ದಾರೆ.
ರದ್ದತಿಯ ಪಟ್ಟಿಯನ್ನು ಪರಿಷ್ಕರಿಸುವ ಯೋಜನೆಯೇನಾದರೂ ಸರ್ಕಾರದ ಬಳಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, "ಉದ್ಯೋಗ ಚೀಟಿಯ ಪರಿಷ್ಕರಣೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ನಿಯಮಿತ ಕಾರ್ಯವಾಗಿದೆ" ಎಂದು ತಿಳಿಸಿದ್ದು, ಈ ಯೋಜನೆಯ ಅನುಷ್ಠಾನವು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದೂ ಹೇಳಿದ್ದಾರೆ.