ಮಹಾರಾಷ್ಟ್ರ ಚುನಾವಣೆಯಲ್ಲಿ ಹಲವು ಅಕ್ರಮಗಳು ಪತ್ತೆಯಾಗಿವೆ: ರಾಹುಲ್ ಗಾಂಧಿ ಆರೋಪ
"ಬಿಜೆಪಿ ಗೆಲುವು ಸಾಧಿಸಿರುವ ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ"

Photo credit: PTI
ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಲವು ಅಕ್ರಮಗಳ ವಿವರಗಳು ಪತ್ತೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮಹಾರಾಷ್ಟ್ರದಲ್ಲಿನ ಕಳೆದ ಚುನಾವಣೆಯನ್ನು ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಎದುರಿಸಿದ್ದವು. ನಾವು ಆ ಚುನಾವಣೆಯ ಬಗ್ಗೆ ಕೆಲವು ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ನಾವು ಮತದಾರರು ಹಾಗೂ ಮತದಾರರ ಪಟ್ಟಿಯ ವಿವರಗಳನ್ನು ಅಧ್ಯಯನ ಮಾಡಿದ್ದೇವೆ. ನಮ್ಮ ತಂಡಗಳು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದು, ನಾವು ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದ್ದೇವೆ” ಎಂದು ಹೇಳಿದರು.
ಇದಕ್ಕೂ ಮುನ್ನ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 70 ಲಕ್ಷದಷ್ಟು ಹೆಚ್ಚುವರಿ ಮತದಾರರು ಕಂಡು ಬಂದಿದ್ದಾರೆ ಎಂದು ಅವರು ಆರೋಪಿಸಿದ್ದರು. ಡಿಸೆಂಬರ್ 24, 2024ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪತ್ರ ಬರೆದು, ಚುನಾವಣಾ ಆಯೋಗ ಹಂಚಿಕೊಂಡಿದ್ದ ಅಂಕಿ-ಸಂಖ್ಯೆಯಲ್ಲಿ 22 ಲಕ್ಷದಷ್ಟು ಹೆಚ್ಚುವರಿ ಮತದಾರರು ಕಂಡು ಬಂದಿದ್ದರು. ಆದರೆ, ನೈಜವಾಗಿ ಅದಕ್ಕಿಂತ ಹೆಚ್ಚು ಮತದಾರರು ಕಂಡು ಬಂದಿದ್ದಾರೆ ಎಂದು ಅವರು ಆಪಾದಿಸಿದ್ದರು.
ಬಿಜೆಪಿ ಗೆಲುವು ಸಾಧಿಸಿರುವ ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಖ್ಯೆ 70 ಲಕ್ಷದಷ್ಟಿದ್ದು, ಇದು ಹಿಮಾಚಲ ಪ್ರದೇಶದ ಜನಸಂಖ್ಯೆಗೆ ಸರಿಸಮಾನವಾದುದಾಗಿದೆ. ಈ ಮತದಾರರನ್ನು ಲೋಕಸಭಾ ಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ನಡುವೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ದೂರಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಸಂದೇಶ ಆತ್ಮನಿರೀಕ್ಷೆ ಮಾಡಿಕೊಳ್ಳಿ, ಕ್ಷಮೆಯಾಚಿಸಿ ಎಂಬುದಾಗಿತ್ತು ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದರು.