ಮಧ್ಯಪ್ರದೇಶ : ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ ಆರೋಪ; ಮೂವರು ಆರೋಪಿಗಳ ಮನೆ ನೆಲಸಮ

ಸಾಂದರ್ಭಿಕ ಚಿತ್ರ
ಭೋಪಾಲ: ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ಕ್ತಿಗಳ ಭೋಪಾಲದಲ್ಲಿರುವ ಮನೆಗಳನ್ನು ಬುಲ್ಡೋಜರ್ ಬಳಸಿ ಗುರುವಾರ ನೆಲಸಮ ಮಾಡಲಾಗಿದೆ.
ಮೋಹನ್ ಯಾದವ್ ಅವರು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದೇ ದಿನದಲ್ಲಿ ಈ ಮನೆಗಳನ್ನು ನೆಲಸಮ ಮಾಡಲಾಗಿದೆ.
ಬಿಜೆಪಿ ಘಟಕದ ಪದಾಧಿಕಾರಿ ದೇವೇಂದ್ರ ಸಿಂಗ್ ಠಾಕೂರ್ ಡಿಸೆಂಬರ್ 5ರಂದು ಜನ ಸಂಪರ್ಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಲ್ಲಿನ ಕೊಳಗೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಚುನಾವಣಾ ಫಲಿತಾಂಶದ ಕುರಿತಂತೆ ವಾಗ್ವಾದ ಉಂಟಾಗಿ ಫಾರೂಕ್ ಎಂಬಾತ ಠಾಕೂರ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಠಾಕೂರ್ ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆ ಪ್ರಯತ್ನದ ಪ್ರಕರಣಕ್ಕೆ ಸಂಬಂಧಿಸಿ ಫಾರೂಕ್ ಅಲ್ಲದೆ, ಶಾರುಖ್ ರೈನ್, ಸಮೀರ್ ಆಲಿಯಾಸ್ ಬಿಲ್ಲು ರೈನ್, ಅಸ್ಲಾಂ ಹಾಗೂ ಬಿಲಾಲ್ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂವರ ಮನೆಗಳು ನಿಯಮ ಉಲ್ಲಂಘಿಸಿದೆ. ಆದುದರಿಂದ ನೆಲಸಮಗೊಳಿಸಲಾಗಿದೆ ಎಂದು ನಗರದ ಹಬೀಬ್ ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ರಾಜ್ ಸಿಂಗ್ ಭಡೋರಿಯಾ ಪ್ರತಿಪಾದಿಸಿದ್ದಾರೆ.