ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ: ರೂ. 20 ಕೋಟಿಗೆ ಬೇಡಿಕೆ
ಮುಕೇಶ್ ಅಂಬಾನಿ (PTI)
ಮುಂಬೈ: ಈ ವಾರದ ಆರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಗೆ ಹತ್ಯೆ ಬೆದರಿಕೆ ಬಂದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ನನಗೆ ರೂ. 20 ಕೋಟಿ ನೀಡದಿದ್ದರೆ ನಿಮ್ಮನ್ನು ಹತ್ಯೆಗೈಯ್ಯುವುದಾಗಿ ಮುಕೇಶ್ ಅಂಬಾನಿಗೆ ವ್ಯಕ್ತಿಯೊಬ್ಬ ಈಮೇಲ್ ಮೂಲಕ ಬೆದರಿಕೆ ಒಡ್ಡಿದ್ದಾನೆ ಎಂದು ndtv.com ವರದಿ ಮಾಡಿದೆ.
“ಒಂದು ವೇಳೆ ನೀವು ನಮಗೆ ರೂ. 20 ಕೋಟಿ ಹಣವನ್ನು ನೀಡದಿದ್ದರೆ ನಾವು ನಿಮ್ಮನ್ನು ಹತ್ಯೆಗೈಯ್ಯುತ್ತೇವೆ. ಭಾರತದಲ್ಲಿ ನಮ್ಮ ಅತ್ಯುತ್ತಮ ಶೂಟರ್ ಗಳಿದ್ದಾರೆ” ಎಂದು ಆ ಈಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ.
ಅಕ್ಟೋಬರ್ 27ರಂದು ಶಾದಾಬ್ ಖಾನ್ ಎಂಬ ವ್ಯಕ್ತಿ ಈ ಬೆದರಿಕೆ ಈಮೇಲ್ ಅನ್ನು ರವಾನಿಸಿದ್ದು, ತಮ್ಮ ಗಮನಕ್ಕೆ ಹತ್ಯೆ ಬೆದರಿಕೆಯ ವಿಷಯವನ್ನು ಮುಕೇಶ್ ಅಂಬಾನಿ ಅವರ ನಿವಾಸ ಅಂಟಿಲಿಯಾದಲ್ಲಿನ ಭದ್ರತಾ ಅಧಿಕಾರಿಗಳು ತಂದ ನಂತರ, ಅವರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮುಂಬೈನ ಗಾಮ್ದೇವಿ ಠಾಣೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 387 ಹಾಗೂ 506 (2) ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಮುಕೇಶ್ ಅಂಬಾನಿ ಅವರಿಗೆ ಹತ್ಯೆ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ.
ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಗುರಿಯಾಗಿಸಿಕೊಂಡು ಅವರಿಗೆ ಬೆದರಿಕೆ ಒಡ್ಡುವ ಅನಾಮಿಕ ಕರೆ ಮಾಡುತ್ತಿದ್ದ ಬಿಹಾರದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಆತ ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸ ಅಂಟಿಲಿಯಾ ಸೇರಿದಂತೆ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ.
2021ರಲ್ಲಿ ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸದೆದುರು ಸ್ಫೋಟಕಗಳನ್ನು ತುಂಬಿದ್ದ ಕಾರೊಂದು ಪತ್ತೆಯಾಗಿತ್ತು. ಆ ಕಾರಿನ ಮಾಲಕರಾಗಿದ್ದ ಉದ್ಯಮಿ ಹೀರನ್ ನೆರೆಯ ಥಾಣೆ ಜಿಲ್ಲೆಯ ಕೆರೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಳೆದ ವರ್ಷದ ಮಾರ್ಚ್ 5ರಂದು ಪತ್ತೆಯಾಗಿದ್ದರು.