ಮುಂಬೈ | ಕಾಂಗ್ರೆಸ್ ನಿಂದ ಮಾಜಿ ಕಾರ್ಪೊರೇಟರ್ ಗಳನ್ನು ಸೆಳೆಯಲು ತಂತ್ರ ಹೆಣೆದ ಬಿಜೆಪಿ
ಪಕ್ಷಾಂತರ ಮಾಡುವರೇ 9 ಮಂದಿ ಕಾಂಗ್ರೆಸ್ ಮುಖಂಡರು?
ದೇವೇಂದ್ರ ಫಡ್ನವಿಸ್ / Photo : PTI
ಮುಂಬೈ: ಸೋಮವಾರ ಮುಂಬೈನ ಒಂಬತ್ತು ಮಂದಿ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಗಳು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗೂ ಮುನ್ನ ಈ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಕೆಲವು ನಾಯಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು indiatoday.in ವರದಿ ಮಾಡಿದೆ.
ಕಳೆದ ಕೆಲವು ವಾರಗಳಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ನಾಯಕರಾದ ಮಿಲಿಂದ್ ದಿಯೋರಾ ಹಾಗೂ ಬಾಬಾ ಸಿದ್ದೀಕಿ ಪಕ್ಷವನ್ನು ತೊರೆದಿದ್ದಾರೆ. ಈ ಪೈಕಿ, ಮಿಲಿಂದ್ ದಿಯೋರಾ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಸೇರ್ಪಡೆಯಾಗಿದ್ದರೆ, ಬಾಬಾ ಸಿದ್ದೀಕಿ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.
ಮಹತ್ವದ ಲೋಕಸಭಾ ಚುನಾವಣೆಗೂ ಮುನ್ನ ಎನ್ ಡಿ ಎ ಮುಂಬೈನತ್ತ ತನ್ನ ಗಮನ ನೆಟ್ಟಿದೆ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಅವಿಭಜಿತ ಬಿಜೆಪಿ ಹಾಗೂ ಶಿವಸೇನೆಯ ಮೈತ್ರಿಕೂಟವು ಮುಂಬೈನ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿತ್ತು.
ಆದರೆ, ಇಂಡಿಯಾ ಟುಡೇ ಸುದ್ದಿ ಸಂಸ್ಥೆಯು ನಡೆಸಿದ್ದ ‘ದೇಶದ ಮನಸ್ಸು’ ಎಂಬ ಸಮೀಕ್ಷೆಯಲ್ಲಿ, ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನೊಳಗೊಂಡ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೊಂಚ ಮುನ್ನಡೆ ಹೊಂದಿದೆ ಎಂಬ ಸಂಗತಿ ಬಹಿರಂಗಗೊಂಡಿತ್ತು.
ಈ ಜನಮತ ಗಣನೆಯಲ್ಲಿ ಈಗಲೇ ಚುನಾವಣೆ ನಡೆದರೆ, ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ 26 ಸ್ಥಾನಗಳನ್ನು ನಿರೀಕ್ಷಿಸಲಾಗಿದ್ದು, ಬಿಜೆಪಿ ಹಾಗೂ ಎನ್ ಡಿ ಎ ಮೈತ್ರಿ ಪಕ್ಷಗಳು 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಅಂದಾಜಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿವೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದರೆ, ಅದರ ಉಳಿದ ಮಿತ್ರ ಪಕ್ಷಗಳು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ನಿರೀಕ್ಷಿಸಲಾಗಿದೆ. ‘ಜನರ ಮನಸ್ಸು’ ಜನಮತ ಗಣನೆಯಲ್ಲಿ ಇಂಡಿಯಾ ಮೈತ್ರಿಕೂಟ ಶೇ. 45ರಷ್ಟು ಮತ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದರೆ, ಎನ್ ಡಿ ಎ ಮೈತ್ರಿಕೂಟವು ಶೇ. 40ರಷ್ಟು ಮತ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಡಿ ಎ ಮೈತ್ರಿಕೂಟವು ಮುಂಬೈನಲ್ಲಿ ಕಾಂಗ್ರೆಸ್ ನಾಯಕರಿಗೆ ಗಾಳ ಹಾಕಲು ಮುಂದಾಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.