ಮುಂಬೈ | ಹಳಿ ತಪ್ಪಿದ ಗೂಡ್ಸ್ ರೈಲು: 40 ರೈಲುಗಳು ರದ್ದು
PC : PTI
ಮುಂಬೈ: ಗೂಡ್ಸ್ ರೈಲೊಂದು ಮಹಾರಾಷ್ಟ್ರದ ಪಾಲ್ಘರ್ ಹಳಿ ತಪ್ಪಿದ್ದರಿಂದ 40ಕ್ಕೂ ಹೆಚ್ಚು ರೈಲುಗಳು ರದ್ದಗೊಂಡಿವೆ ಎಂದು ಪಶ್ಚಿಮ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇವು ದಹನು ರಸ್ತೆ-ಪನ್ವೇಲ್-ವಸಾಯಿ ರಸ್ತೆ, ವಸಾಯಿ ರಸ್ತೆ-ಪನ್ವೇಲ್-ವಸಾಯಿ ರಸ್ತೆ ಹಾಗೂ ವಸಾಯಿ ರಸ್ತೆ-ಪನ್ವೇಲ್-ದಹನು ರಸ್ತೆ ಮಾರ್ಗವಾಗಿ ಸಂಚರಿಸುವ ರೈಲುಗಳು ಎಂದು ಹೇಳಲಾಗಿದೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಪಶ್ಚಿಸಮ ರೈಲ್ವೆ, “ದಹನು ರಸ್ತೆ-ಪನ್ವೇಲ್-ವಸಾಯಿ ರಸ್ತೆ, ವಸಾಯಿ ರಸ್ತೆ-ಪನ್ವೇಲ್-ವಸಾಯಿ ರಸ್ತೆ ಹಾಗೂ ವಸಾಯಿ ರಸ್ತೆ-ಪನ್ವೇಲ್-ದಹನು ರಸ್ತೆ ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ಪಾಲ್ಘರ್ ಬಳಿ ಗೂಡ್ಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿರುವುದರಿಂದ ರದ್ದುಗೊಳಿಸಲಾಗಿದೆ. ಇದರಿಂದಾಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ” ಎಂದು ತಿಳಿಸಿದೆ.
‘ಹಳಿ ತಪ್ಪಿರುವುದರಿಂದ, ಈ ಮಾರ್ಗದ ಕೆಲವು ರೈಲುಗಳ ಸಂಚಾರ ವ್ಯತ್ಯಯವಾಗಿದೆ. ಈ ಮಾರ್ಗದ 41 ರೈಲುಗಳು ರದ್ದುಗೊಂಡಿದ್ದರೆ, 18 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. 9 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ 22 ರೈಲುಗಳ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಲಾಗಿದೆ” ಎಂದು ತನ್ನ ಪ್ರಕಟಣೆಯಲ್ಲಿ ಪಶ್ಚಿಮ ರೈಲ್ವೆ ತಿಳಿಸಿದೆ.
ದಹನು ಮಾರ್ಗದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿರುವುದರಿಂದ ಮುಂಬೈನ ಜೀವನಾಡಿಯಾದ ಉಪನಗರ ರೈಲು ಸೇವೆಯೂ ವ್ಯತ್ಯಯಗೊಂಡಿದೆ. ದಹನು ಮಾರ್ಗದ ಎಲ್ಲ ಉಪನಗರ ರೈಲುಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ರದ್ದುಗೊಳಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇಂದು ಬೆಳಗ್ಗೆ ವಿಶಾಖಪಟ್ಟಣಂನಿಂದ ಉಕ್ಕಿನ ಸುರುಳಿಗಳನ್ನು ತುಂಬಿಕೊಂಡು ಗುಜರಾತ್ ನ ಕರಂಬೇಲಿಯತ್ತ ತೆರಳುತ್ತಿದ್ದ ಗೂಡ್ಸ್ ರೈಲಿನ ಏಳು ಬೋಗಿಗಳು ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪಶ್ಚಿಮ ರೈಲ್ವೆ ವಕ್ತಾರರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.