ಮುಂಬೈ | ಕಾರ್ಖಾನೆ ಬಾಯ್ಲರ್ ಸ್ಫೋಟ ; ಕನಿಷ್ಠ 8 ಮೃತ್ಯು
60ಕ್ಕೂ ಅಧಿಕ ಮಂದಿಗೆ ಗಾಯ, ಆಸುಪಾಸಿನ ಮನೆ, ಕಟ್ಟಡಗಳಿಗೆ ಹಾನಿ ► ಫ್ಯಾಕ್ಟರಿಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಭಾರೀ ಕಾರ್ಯಾಚರಣೆ
PC ; NDTV
ಮುಂಬೈ : ಮುಂಬೈ ಸಮೀಪದ ಥಾಣೆಯ ಡೊಂಬಿವಲಿಯ ಕಾರ್ಖಾನೆಯೊಂದರಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ ಬಳಿಕ ಉಂಟಾದ ಅಗ್ನಿಅನಾಹುತದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ರಾಸಾಯನಿಕ ಕಾರ್ಖಾನೆಯೊಂದರ ಒಳಗಡೆ ಇರುವ ಬಾಯ್ಲರ್ ಸ್ಫೋಟಿಸಿ ಅಗ್ನಿ ಅನಾಹುತವುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡ ನಡೆದ ಸ್ಥಳದಿಂದ ಕನಿಷ್ಠ ಎಂಟು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕಾರ್ಖಾನೆಯಲ್ಲಿ ಮೂರು ಸ್ಫೋಟಗಳುಂಟಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
NDRF, TDRF ಹಾಗೂ ಅಗ್ನಿಶಾಮಕದಳದ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು ಅವು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆಯೆದುಂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಧಗಧಗನೆ ಉರಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಸುಮಾರು 15 ಎಂಜಿನ್ ಗಳನ್ನು ನಿಯೋಜಿಸಲಾಗಿತ್ತು. ಸುಮಾರು 5 ತಾಸುಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಖಾನೆಯ ಬಾಯ್ಲರ್ ನ ಸ್ಪೋಟದ ತೀವ್ರತೆಯಿಂದಾಗಿ ಆಸುಪಾಸಿನ ಮನೆಗಳ ಕಿಟಕಿಗಳು ಒಡೆದುಹೋಗಿವೆ. ಒಂದು ಕಾರ್ ಶೋರೂಂ ಸೇರಿದಂತೆ ಇನ್ನೆರಡು ಕಟ್ಟಡಗಳಿಗೂ ಬೆಂಕಿ ಹರಡಿದೆಯೆಂದು ವರದಿಗಳು ತಿಳಿಸಿವೆ.
ಸ್ಫೋಟದಿಂದಾಗಿ ಹಲವರು ವಾಹನಗಳು ಹಾಗೂ ಮನೆಗಳು ಹಾನಿಗೀಡಾಗಿರುವುದಾಗಿ ತಿಳಿದುಬಂದಿದೆ.