ಮುಂಬೈ : ದೋಣಿಗೆ ನೌಕಾಪಡೆಯ ಸ್ಪೀಡ್ ಬೋಟ್ ಢಿಕ್ಕಿ ; 13 ಮಂದಿ ಸಮುದ್ರಪಾಲು
PC: x.com/AstroCounselKK
ಮುಂಬೈ: ಎಂಜಿನ್ ಪರೀಕ್ಷೆ ನಡೆಸುತ್ತಿದ್ದ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ಕಳೆದುಕೊಂಡು, ಕಡಲ ಕಿನಾರೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ನೌಕಾಪಡೆಯ ಅಧಿಕಾರಿ ಸಹಿತ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.
ಸುಮಾರು 110 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿಯಿಂದ ಈ ಅಪಘಾತದ ವಿಡಿಯೊ ಸೆರೆ ಹಿಡಿಯಲಾಗಿದೆ. ನೌಕಾಪಡೆಯ ನೌಕೆಯಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ದೋಣಿಯಲ್ಲಿದ್ದ 10 ಮಂದಿ ಸಮುದ್ರಪಾಲಾಗಿದ್ದು, ನೌಕಾಪಡೆಯ ದೋಣಿಯಲ್ಲಿದ್ದ ಇಬ್ಬರು ಸೇರಿದಂತೆ 102 ಮಂದಿಯನ್ನು ರಕ್ಷಿಸಲಾಗಿದೆ.
"ಸಂಜೆ ಸುಮಾರು 4ರ ವೇಳೆಗೆ ಎಂಜಿನ್ ಪರೀಕ್ಷೆ ನಡೆಸುತ್ತಿದ್ದ ನೌಕಾಪಡೆಯ ನಾವೆ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ದೋಣಿ ನೀಲ್ ಕಮಲ್ಗೆ ಮುಂಬೈನ ಕರಂಜಾದಲ್ಲಿ ಡಿಕ್ಕಿ ಹೊಡೆದಿದೆ. ಈ ದೋಣಿ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಡಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು" ಎಂದು ನೌಕಾಪಡೆ ಹೇಳಿಕೆ ನೀಡಿದೆ.
ಘಟನೆ ನಡೆದ ಎರಡು ಗಂಟೆ ಬಳಿಕ ದುರಂತದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ನೌಕೆ ಮುಳುಗುತ್ತಿದೆ ಹಾಗೂ ಕಾರಣ ಗೊತ್ತಾಗಿಲ್ಲ ಎಂದು ಈ ಮೊದಲು ವರದಿಯಾಗಿತ್ತು. ಕೊಲಬಾ ಪೊಲೀಸರು ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಪ್ರಧಾಣಿ ನರೇಂದ್ರ ಮೋದಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಿ ಕಚೇರಿಯಿಂದ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.