ಗ್ಯಾಂಗಸ್ಟರ್ ಅರುಣ್ ಗಾವ್ಳಿ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ತಡೆ
ಸರ್ವೋಚ್ಚ ನ್ಯಾಯಾಲಯ , ಅರುಣ್ ಗಾವ್ಳಿ | PC : ANI
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಗ್ಯಾಂಗ್ಸ್ಟರ್-ರಾಜಕಾರಣಿ ಅರುಣ್ ಗಾವ್ಳಿಯ ಅವಧಿಪೂರ್ವ ಬಿಡುಗಡೆಗೆ ಮುಂದಿನ ಆದೇಶದವರೆಗೆ ತಡೆ ನೀಡಿದೆ.
2006ರ ಕ್ಷಮಾದಾನ ನೀತಿಯಡಿ ಅವಧಿಪೂರ್ವ ಬಿಡುಗಡೆಯನ್ನು ಕೋರಿ ಗಾವ್ಳಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದ ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠದ ಆದೇಶದ ಜಾರಿಗೆ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲ ಪೀಠವು, ಮಹಾರಾಷ್ಟ್ರ ಸರಕಾರದ ಅರ್ಜಿಯ ಕುರಿತು ಗಾವ್ಳಿಗೆ ನೋಟಿಸನ್ನೂ ಹೊರಡಿಸಿತು.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಕೋಕಾ)ಯಡಿ ದೋಷನಿರ್ಣಯಕ್ಕೊಳಗಾಗಿರುವ ಗಾವ್ಳಿ 2006ರ ಕ್ಷಮಾದಾನ ನೀತಿಯ ಲಾಭವನ್ನು ಪಡೆಯಲು ಬಯಸಿದ್ದಾನೆ ಎಂದು ಹೇಳಿದ ಮಹಾರಾಷ್ಟ್ರ ಸರಕಾರದ ಪರ ಹಿರಿಯ ವಕೀಲ ರಾಜಾ ಠಾಕ್ರೆ ಅವರು, ಉಚ್ಚ ನ್ಯಾಯಾಲಯದ ಎ.5ರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು.
2007ರಲ್ಲಿ ನಡೆದಿದ್ದ ಮುಂಬೈನ ಶಿವಸೇನೆ ಕಾರ್ಪೊರೇಟರ್ ಕಮಲಾಕರ ಜಮಸಂಡೇಕರ್ ಹತ್ಯೆ ಪ್ರಕರಣದಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಆಗಸ್ಟ್ 2012ರಲ್ಲಿ ಗಾವ್ಳಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 17 ಲಕ್ಷ ರೂ.ಗಳ ದಂಡವನ್ನು ವಿಧಿಸಿತ್ತು.
ಅಖಿಲ ಭಾರತೀಯ ಸೇನಾದ ಸ್ಥಾಪಕ ಗಾವ್ಳಿ 2004-2009ರ ಅವಧಿಯಲ್ಲಿ ಮುಂಬೈನ ಚಿಂಚಪೋಕ್ಲಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದ. ದಗ್ಡಿ ಚಾಳ್ನೊಂದಿಗೆ ಆತ ಅಪರಾಧ ಲೋಕದಲ್ಲಿ ಮುನ್ನೆಲೆಗೆ ಬಂದಿದ್ದ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.