ಸಂಗೀತಗಾರ ಟಿಎಂ ಕೃಷ್ಣ ವಿರುದ್ಧ ಆರೋಪಿಸಿದ ಕರ್ನಾಟಕ ಶಾಸ್ತ್ರೀಯ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಅವರನ್ನು ಟೀಕಿಸಿದ ಮ್ಯೂಸಿಕ್ ಅಕಾಡೆಮಿ
Photo : X/@ranjanigayatri
ಚೆನ್ನೈ: ಸಹ ಸಂಗೀತಗಾರ ಟಿ ಎಂ ಕೃಷ್ಣ ಅವರ ವಿರುದ್ಧ ದುರುದ್ದೇಶದೊಂದಿಗೆ ಆರೋಪಗಳನ್ನು ಹೊರಿಸಿದ್ದಕ್ಕಾಗಿ ಕರ್ನಾಟಕ ಶಾಸ್ತ್ರೀಯ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಅವರನ್ನು ಮ್ಯೂಸಿಕ್ ಅಕಾಡೆಮಿ, ಮದ್ರಾಸ್ ಟೀಕಿಸಿದೆ.
ಟಿ ಎಂ ಕೃಷ್ಣ ಅವರಿಗೆ ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ಅವರ ಸಾಧನೆಗಾಗಿ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿರುವುದರನ್ನು ಅಕಾಡೆಮಿ ಅಧ್ಯಕ್ಷ ಎನ್ ಮುರಳಿ ಉಲ್ಲೇಖಿಸಿದ್ದಾರೆ.
ಸಂಗೀತ ಅಕಾಡೆಮಿ ಸಮ್ಮೇಳನದಿಂದ ಹಿಂದೆ ಸರಿಯುತ್ತಿರುವುದಾಗಿ ಮಾರ್ಚ್ 20ರಂದು ಹೇಳಿಕೆ ನೀಡಿದ್ದ ರಂಜನಿ-ಗಾಯತ್ರಿ, ತಮ್ಮ ನಿರ್ಧಾರಕ್ಕೆ ಸಮ್ಮೇಳನದಲ್ಲಿ ಟಿ ಎಂ ಕೃಷ್ಣ ಅವರ ಭಾಗವಹಿಸುವಿಕೆ ಕಾರಣ ಎಂದಿದ್ದಾರೆ. ಟಿ ಎಂ ಕೃಷ್ಣ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅವಮಾನಿಸಿದ್ದಾರೆ ಎಂದೂ ಅವರು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಕಾಡೆಮಿ ಅಧ್ಯಕ್ಷ ಮುರಳಿ, ತಮಗೆ ಪತ್ರದಿಂದ ಆಘಾತವಾಗಿದೆ. ಅದು ಕೂಡ ಹಿರಿಯ ಗೌರವಾನ್ವಿತ ಸಂಗೀತಗಾರರ ವಿರುದ್ಧ ಈ ರೀತಿಯ ಆರೋಪ ಆಘಾತಕಾರಿ ಎಂದಿದ್ದರು.
ಪತ್ರಿಕ್ಕೆ ತಾವು ಉತ್ತರಿಸುವ ಮೊದಲೇ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಕ್ಕೆ ಅವರು ರಂಜನಿ ಮತ್ತು ಗಾಯತ್ರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಅವರ ಪತ್ರದ ಹಿಂದಿನ ಉದ್ದೇಶಗಳ ಬಗ್ಗೆ ಸಂಶಯ ಮೂಡಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 20 ರಂದು, ರಂಜನಿ ಮತ್ತು ಗಾಯತ್ರಿ, ತಮ್ಮ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಟಿಎಂ ಕೃಷ್ಣ ಅವರ ಭಾಗವಹಿಸುವಿಕೆಯನ್ನು ಉಲ್ಲೇಖಿಸಿ ಸಮ್ಮೇಳನದಿಂದ ಹಿಂದೆ ಸರಿಯುವ ಬಗ್ಗೆ ವಿವರವಾದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.