ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಮ್ ಲೀಗ್ ಛಾಪು ಎದ್ದು ಕಾಣುತ್ತಿದೆ: ಪ್ರಧಾನಿ ಮೋದಿ
ಪ್ರಧಾನಿ ಮೋದಿಗೆ ಇತಿಹಾಸ ಗೊತ್ತಿಲ್ಲ ಎಂದ ಕಾಂಗ್ರೆಸ್
ನರೇಂದ್ರ ಮೋದಿ | Photo: PTI
ಸಹರಣ್ಪುರ್ (ಉತ್ತರ ಪ್ರದೇಶ): ಕಾಂಗ್ರೆಸ್ ಪಕ್ಷವನ್ನು ಮುಸ್ಲಿ ಲೀಗ್ನೊಂದಿಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಸಂಪೂರ್ಣವಾಗಿ ಮುಸ್ಲಿಂ ಲೀಗ್ ಹೆಜ್ಜೆ ಗುರುತುಗಳನ್ನು ಹೊಂದಿದೆ. ಉಳಿದ ಭಾಗವು ಎಡಪಂಥೀಯರ ಪ್ರಭಾವಕ್ಕೆ ಒಳಗಾಗಿದೆ" ಎಂದು ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ಸಹರಣ್ಪುರ್ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್, ಹಲವು ದಶಕಗಳ ಹಿಂದೆಯೇ ಅಂತ್ಯಗೊಂಡಿದೆ ಎಂದು ಟೀಕಿಸಿದರು.
"ನಿನ್ನೆ ಬಿಡುಗಡೆಯಾಗಿರುವ ಕಾಂಗ್ರೆಸ್ ಪ್ರಣಾಳಿಕೆಯು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಚಿಂತನೆ ಏನಿತ್ತೊ ಅದೇ ಚಿಂತನೆಯನ್ನು ಪ್ರತಿಫಲಿಸಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಸಂಪೂರ್ಣವಾಗಿ ಮುಸ್ಲಿಂ ಲೀಗ್ ಹೆಜ್ಜೆ ಗುರುತುಗಳನ್ನು ಹೊಂದಿದ್ದು, ಉಳಿದ ಭಾಗವು ಎಡಪಂಥೀಯರ ಪ್ರಭಾವಕ್ಕೆ ಒಳಗಾಗಿದೆ" ಎಂದು ಕಟುವಾಗಿ ಟೀಕಿಸಿದರು.
ತನ್ನ 46 ಪುಟಗಳ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯನ್ನು ಶೇ. 50ಕ್ಕಿಂತ ಹೆಚ್ಚು ಮಾಡುವುದು, ಉದ್ಯೋಗ ಸೃಷ್ಟಿ ಇತ್ಯಾದಿ ಜನಪರ ಆಶ್ವಾಸನೆಗಳನ್ನು ನೀಡಿದೆ.
ಪ್ರಧಾನಿ ಮೋದಿಗೆ ಇತಿಹಾಸ ಗೊತ್ತಿಲ್ಲ ಎಂದ ಕಾಂಗ್ರೆಸ್:
ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಮ್ ಲೀಗ್ ಛಾಪು ಮೂಡಿದೆ ಎಂಬ ಹೇಳಿಕೆಗಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್,ಅವರಿಗೆ ಇತಿಹಾಸ ಗೊತ್ತಿಲ್ಲ. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿಯವರೇ ಸ್ವತಃ 1940ರ ದಶಕದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮ್ ಲೀಗ್ ಜೊತೆ ಸಮ್ಮಿಶ್ರ ಸರಕಾರದ ಭಾಗವಾಗಿದ್ದರು ಎಂದು ಹೇಳಿದೆ. ಬಿಜೆಪಿ ಒಡೆದು ಆಳುವ ರಾಜಕೀಯವನ್ನು ನಡೆಸುತ್ತಿದೆ ಎಂದೂ ಅದು ಆರೋಪಿಸಿದೆ.
ಶನಿವಾರ ಸಹರಾನ್ಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಮ್ ಲೀಗ್ ಛಾಪು ಎದ್ದು ಕಾಣುತ್ತಿದೆ ಮತ್ತು ಅದರ ಒಂದು ಭಾಗವು ಎಡಪಂಥೀಯರ ಪ್ರಭಾವವನ್ನು ಹೊಂದಿದೆ ಎಂದು ಟೀಕಿಸಿದ್ದರು.
ಮೋದಿಯವರ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು,ಪ್ರಧಾನಿಯವರಿಗೆ ತನ್ನ ಇತಿಹಾಸ ತಿಳಿದಿಲ್ಲ. ವಾಸ್ತವದಲ್ಲಿ ಆಗ ಹಿಂದು ಮಹಾಸಭಾದ ಅಧ್ಯಕ್ಷರಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರೇ ಸ್ವತಃ ಬಂಗಾಳದಲ್ಲಿ ಮುಸ್ಲಿಮರೊಂದಿಗೆ ಸಮ್ಮಿಶ್ರ ಸರಕಾರದ ಭಾಗವಾಗಿದ್ದರು ಎಂದು ಹೇಳಿದರು.
ಹಿಂದು ಮಹಾಸಭಾ ಸಿಂಧ್ ಮತ್ತು ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿಯೂ ಮುಸ್ಲಿಮ್ ಲೀಗ್ ಜೊತೆ ಸಮ್ಮಿಶ್ರ ಸರಕಾರದಲ್ಲಿತ್ತು.
ಒಡೆದು ಆಳುವ ರಾಜಕೀಯವನ್ನು ನಂಬಿಕೊಂಡಿರುವುದು ಮತ್ತು ಅದನ್ನು ಆಚರಿಸುತ್ತಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದು ರಮೇಶ ಹೇಳಿದರು.
ಕಾಂಗ್ರೆಸ್ ಲೋಕಸಭಾ ಚುನಾವಣೆಗಳಿಗಾಗಿ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.