ಭಾರತದಲ್ಲಿ ವ್ಯವಸ್ಥಿತವಾಗಿ ಮುಸ್ಲಿಮರ ಅಸ್ತಿತ್ವವನ್ನೇ ನಿರಾಕರಿಸುವ ಕೆಲಸ ನಡೆದಿದೆ : ರಾಜ್ ದೀಪ್ ಸರ್ದೇಸಾಯಿ
ರಾಜ್ ದೀಪ್ ಸರ್ದೇಸಾಯಿ | Photo: The News Minute
ಹೊಸದಿಲ್ಲಿ : ಭಾರತೀಯ ರಾಜಕಾರಣದಲ್ಲಿನ ಪ್ರಾತಿನಿಧ್ಯ ಮತ್ತು ಒಳಗೊಳ್ಳುವಿಕೆ ಸುತ್ತಲಿನ ಗಂಭೀರ ವಿಷಯಗಳ ಕುರಿತು ಹೊಸ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಟುಡೇ ಕಾನ್ ಕ್ಲೇವ್ 2024ನ 21ನೇ ಆವೃತ್ತಿಯಲ್ಲಿ ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಚಿಂತನೆಗೆ ಹಚ್ಚುವಂಥ ಭಾಷಣ ಮಾಡಿದ್ದಾರೆ. ದೇಶದ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಕೊರತೆ ಹಾಗೂ ವೈವಿಧ್ಯಮಯ ಜನಾಂಗಗಳನ್ನು ಹೊಂದಿರುವ ಭಾರತದ ಮೇಲೆ ಇಂಥ ಪ್ರವೃತ್ತಿಯಿಂದ ಆಗಲಿರುವ ಪರಿಣಾಮಗಳ ಸುತ್ತ ಸರ್ದೇಸಾಯಿ ಭಾಷಣ ಕೇಂದ್ರೀಕೃತವಾಗಿತ್ತು.
ತಮ್ಮ ಭಾಷಣದ ಸಂದರ್ಭದಲ್ಲಿ “ಅಬ್ಕಿ ಬಾರ್ 400 ಪಾರ, 350 ಪಾರ್’ ಘೋಷಣೆಯನ್ನು ಉಲ್ಲೇಖಿಸಿದ ಸರ್ದೇಸಾಯಿ, ಸಂಸತ್ತಿನಲ್ಲಿ ಗಮನಾರ್ಹ ಬಹುಮತವನ್ನು ಗಳಿಸುವ ಬಿಜೆಪಿಯ ಆಶಯದ ಘೋಷವಾಕ್ಯವನ್ನು ಪ್ರಸ್ತಾಪಿಸಿದರು. ಆದರೆ, ಈ ಆಶಯಗಳ ಹೊರತಾಗಿಯೂ, ಹಾಲಿ ಸರಕಾರದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದನಿಲ್ಲದಿರುವುದರತ್ತ ಅವರು ಬೊಟ್ಟು ಮಾಡಿದರು. ಇದಲ್ಲದೆ, ಆಡಳಿತಾರೂಢ ಪಕ್ಷವು 350ರಿಂದ 400 ಸಂಸದರನ್ನು ಗೆಲ್ಲಬಹುದು ಎಂಬ ಮುನ್ನೋಟವು, ಭಾರತದ ಜನಸಂಖ್ಯೆಯಲ್ಲಿ ಶೇ. 13ರಷ್ಟು ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯವನ್ನು ಪ್ರಾತಿನಿಧ್ಯದಿಂದ ಹೊರಗಿಡಬಹುದು ಎಂದು ಅವರು ಪ್ರತಿಪಾದಿಸಿದರು.
ಸಮಾಜದ ವಿವಿಧ ಸ್ತರಗಳಲ್ಲಿ ಮುಸ್ಲಿಮರನ್ನು ಅಂಚಿಗೆ ತಳ್ಳುತ್ತಿರುವ ಕುರಿತು ಗಮನ ಸೆಳೆದ ಸರ್ದೇಸಾಯಿ, ಭಾರತದಲ್ಲಿ ವ್ಯವಸ್ಥಿತವಾಗಿ ಮುಸ್ಲಿಮರ ಅಸ್ತಿತ್ವವನ್ನೇ ನಿರಾಕರಿಸುವ ಕೆಲಸ ನಡೆದಿರುವ ಕುರಿತು ನೇರವಾಗಿ ಪ್ರಸ್ತಾಪಿಸಿದರು. ಅವರು ತಮ್ಮದೇ ನಿದರ್ಶನ ನೀಡಿ, ತಮ್ಮ ನೆರೆಹೊರೆಯಲ್ಲಿ ಮುಸ್ಲಿಂ ನಿವಾಸಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿರುವುದಾಗಿ ಹೇಳಿಕೊಂಡರು. ಈ ವಿದ್ಯಮಾನವು ಹೊರಗಿಡುವಿಕೆ ಮತ್ತು ಅಂಚಿಗೆ ದೂಡುವ ಸಂಸ್ಕೃತಿಯನ್ನು ಶಾಶ್ವತವಾಗಿಸಿರುವ ಭಾರತೀಯ ಸಮಾಜದಲ್ಲಿನ ಆಳವಾದ ಪೂರ್ವಗ್ರಹಗಳು ಹಾಗೂ ಏಕತಾನತೆಯ ಕೊಡುಗೆ ಎಂದು ಅವರು ಪ್ರತಿಪಾದಿಸಿದರು.
ರಾಜ್ ದೀಪ್ ಸರ್ದೇಸಾಯಿ ಅವರ ಈ ಭಾಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.