ಪ್ರಸ್ತಾವಿತ ಏಕರೂಪ ನಾಗರಿಕ ಕಾಯ್ದೆ ಹಾಗೂ ಅರಣ್ಯ ಕಾಯ್ದೆಗೆ ನಾಗಾಲ್ಯಾಂಡ್ ವಿಧಾನಸಭೆ ವಿರೋಧ
ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಫಿಯು ರಿಯೊ | Photo : twitter.com/Neiphiu_Rio
ಕೊಹಿಮಾ: ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆ ಹಾಗೂ ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆಯ ಜಾರಿಯನ್ನು ಸೋಮವಾರ ನಾಗಾಲ್ಯಾಂಡ್ ವಿಧಾನಸಭೆ ವಿರೋಧಿಸಿದ್ದು, ತನಗೆ 16 ಅಂಶಗಳ ಒಪ್ಪಂದ ಹಾಗೂ ವಿಧಿ 371ಎ ಅಡಿ ರಕ್ಷಣೆ ನೀಡಲು ಮನವಿ ಮಾಡಿದೆ ಎಂದು ndtv.com ವರದಿ ಮಾಡಿದೆ.
ಈ ವಿಷಯವನ್ನು ಮಳೆಗಾಲದ ಅಧಿವೇಶನದ ಮೊದಲ ದಿನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪ್ರಗತಿಪರ ಪಕ್ಷ (NDPP), ಬಿಜೆಪಿ, ಎನ್ಸಿಪಿ, ಎಲ್ಜೆಪಿ (ರಾಮ್ ವಿಲಾಸ್), ನಾಗಾ ಜನತಾ ರಂಗ (NPF), ಆರ್ ಪಿ ಐ (ಅಠಾವಳೆ), ಜೆಡಿಯು ಹಾಗೂ ಪಕ್ಷೇತರ ಶಾಸಕರು ಸೇರಿದಂತೆ ಎಲ್ಲ ಪಕ್ಷಗಳೂ ಚರ್ಚಿಸಿದವು.
ಈ ಕುರಿತು ಪ್ರತಿಕ್ರಿಯಿಸಿದ ಎನ್ಪಿಎಫ್ ಶಾಸಕ ಕುಝುಲುಝೊ ನಿಯೆನು, ವಿಧಿ 371ಎ ಅಡಿ ನಾಗಾಗಳಿಗೆ ವಿಶೇಷ ರಕ್ಷಣೆಯಿದ್ದು, ಹೀಗಾಗಿ ಏಕರೂಪ ನಾಗರಿಕ ಸಂಹಿತೆ ಮತ್ತು ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ಚರ್ಚಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.
“ವಿಧಿ 371ಎ ಸಂಸತ್ತಿನ ಯಾವ ಕಾಯ್ದೆಯೂ ನಾಗಾಗಳ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅವರ ಸಾಂಪ್ರದಾಯಿಕ ಕಾನೂನುಗಳು ಮತ್ತು ನಿಯಮಗಳು, ನಾಗಾ ಸಾಂಪ್ರದಾಯಿಕ ಕಾನೂನುಗಳ ಪ್ರಕಾರ ಕೈಗೊಳ್ಳುವ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯ ನಿರ್ಣಯಗಳ ಆಡಳಿತ ರಾಜ್ಯ ವಿಧಾನಸಭಾ ನಿರ್ಣಯದನ್ವಯ ತನ್ನ ನೆಲದ ಮಾಲಕತ್ವ ಮತ್ತು ಪರಭಾರೆಗೆ ಸಂಬಂಧಿಸಿದಂತೆ ಅನ್ವಯವಾಗುವುದಿಲ್ಲ” ಎಂದು ಅವರು ಹೇಳಿದರು. ಏಕರೂಪ ನಾಗರಿಕ ಸಂಹಿತೆ ಹಾಗೂ ಅರಣ್ಯ ಕಾಯ್ದೆಯನ್ನು ತಿರಸ್ಕರಿಸುವ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಬೇಕು ಎಂದು ಅವರು ಪ್ರಸ್ತಾಪ ಮಂಡಿಸಿದರು.
ಇದರ ಬೆನ್ನಿಗೇ, ಎರಡೂ ವಿಷಯಗಳನ್ನು ಪರಿಗಣಿಸುವ ಎರಡು ಪ್ರತ್ಯೇಕ ನಿರ್ಣಯಗಳನ್ನು ಮಂಗಳವಾರ ಮಂಡಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಶರಿನ್ ಗೈನ್ ಲಾಂಗ್ ಕುಮರ್ ಮಾಹಿತಿ ನೀಡಿದ್ದಾರೆ.