ನಾಗಪುರ ಹಿಂಸಾಚಾರ: ಎಂಡಿಪಿ ನಾಯಕನ ಬಂಧನ

PC: x.com/iGorilla19
ನಾಗಪುರ: ನಗರದಲ್ಲಿ ಸೋಮವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆಯೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಂಧಿತನನ್ನು ಮೈನಾರಿಟೀಸ್ ಡೆಮಾಕ್ರಾಟಿಕ್ ಪಾರ್ಟಿ (ಎಂಡಿಪಿ)ಯ ನಾಯಕ ಫಾಹಿಮ್ ಶಮೀಮ್ ಖಾನ್ ಎಂದು ಗುರುತಿಸಲಾಗಿದೆ.
ಬಂಧನಕ್ಕೆ ಮುನ್ನ ನಾಗಪುರ ಪೊಲೀಸರು, ಶಮೀಮ್ ಖಾನ್ನ ಭಾವಚಿತ್ರ ಹಾಗೂ ಹಿಂಸಾಚಾರ ಭುಗಿಲೇಳುವುದಕ್ಕೆ ಕೆಲವೇ ತಾಸುಗಳ ಮುನ್ನ ಆತ ಮಾಡಿದ್ದೆನ್ನಲಾದ ಪ್ರಚೋದನಕಾರಿ ಭಾಷಣದ ವೀಡಿಯೊವನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ್ದರು.
ಸೋಮವಾರ ರಾತ್ರಿ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾದ ನಾಗಪುರದಲ್ಲಿ ಬುಧವಾ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿ ನಿಯಂತ್ರಣದಲ್ಲಿದೆಯೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆದರೆ ನಗರದ ಹಲವಾರು ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿಯಲಿದೆಯೆಂದು ಅವರು ಹೇಳಿದ್ದಾರೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಗಲ್ ದೊರೆ ಔರಂಗಜೇಬ್ನ ಸಮಾಧಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸಂಘಪರಿವಾರದ ಸಂಘಟನೆಯೊಂದು ಧರಣಿ ನಡೆಸಿದ ಸಂದರ್ಭ ಪವಿತ್ರ ಧಾರ್ಮಿಕ ಗ್ರಂಥವೊಂದನ್ನು ಸುಟ್ಟುಹಾಕಲಾಯಿತೆಂಬ ವದಂತಿಗಳು ಹರಡಿದ ಬಳಿಕ ನಾಗಪುರದ ಮಹಲ್ ಪ್ರದೇಶದಲ್ಲಿರುವ ಚಿಟ್ನಿ, ಪಾರ್ಕ್ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಪೊಲೀಸರ ಮೇಲೂ ಕಲ್ಲುತೂರಾಟ ನಡೆದಿದ್ದು, ಕನಿಷ್ಠ 34 ಸಿಬ್ಬಂದಿ ಗಾಯಗೊಂಡಿದ್ದರು.