ಬಾಲಕಿಗೆ ಆಘಾತವಾಗಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರ ಆರೋಪಿಯನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್ನ ನಾಗಪುರ ಪೀಠ!
"ಅತ್ಯಾಚಾರಕ್ಕೆ ಒಳಗಾದಲ್ಲಿ ಬಾಲಕಿ ಸಹಜವಾಗಿ ವರ್ತಿಸುವುದಿಲ್ಲ" ಎಂದ ನ್ಯಾಯಾಲಯ
ಬಾಂಬೆ ಹೈಕೋರ್ಟ್ ನಾಗಪುರ ಪೀಠ | Photo : thelivenagpur.com
ನಾಗಪುರ : ಅತ್ಯಾಚಾರಕ್ಕೆ ಒಳಗಾದಲ್ಲಿ ಬಾಲಕಿ ಆಘಾತದಿಂದ ಸ್ತಂಭೀಭೂತಳಾಗುತ್ತಾಳೆ. ಸಹಜವಾಗಿ ವರ್ತಿಸುವುದಿಲ್ಲ ಮತ್ತು ಆಟವಾಡುವುದಿಲ್ಲ ಎಂಬ ಕಾರಣ ನೀಡಿ, 64 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ನೀಡಿದ್ದ ಶಿಕ್ಷೆಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಆರೋಪಿಯನ್ನು ದೋಷಮುಕ್ತಗೊಳಿಸಿದೆ.
2019ರ ಮಾರ್ಚ್ನಲ್ಲಿ ನಡೆದ ಪ್ರಕರಣದಲ್ಲಿ ಎಂಟು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅಮರಾವತಿ ಜಿಲ್ಲೆಯ ಅಚಲಪುರ ನಿವಾಸಿ ವಿಜಯ್ ಜವಾಂಜಲ್ ಮೇಲಿತ್ತು. ಪೊಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆ ಸೆಕ್ಷನ್ 376ಎಬಿ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ, ಆರೋಪಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿತ್ತು.
"ಆರೋಪಿ ಅಂಥ ಕೃತ್ಯ ಎಸಗಿದ್ದಲ್ಲಿ, ಅದು ಅತಿರೇಕದ ವರ್ತನೆ. ಆ ಕೃತ್ಯ ಬಾಲಕಿಯಲ್ಲಿ ಭೀತಿ ಹುಟ್ಟಿಸಬೇಕಿತ್ತು. ಅದು ಅಸಾಧ್ಯ ನೋವು ಮತ್ತು ಆಘಾತವನ್ನು ಆಕೆಯಲ್ಲಿ ಉಂಟಮಾಡಬೇಕಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ, ಅಂಥ ಶೋಚನೀಯ ಪರಿಸ್ಥಿತಿಯಲ್ಲಿ ಕೃತ್ಯದ ಬಳಿಕ ಆಕೆ ಅಲ್ಲಿಂದ ಓಡಿಹೋಗಬೇಕಿತ್ತು ಹಾಗೂ ತಾಯಿ ಬಳಿ ಆಘಾತವನ್ನು ಹೇಳಿಕೊಳ್ಳಬೇಕಿತ್ತು" ಎಂದು ನ್ಯಾಯಮೂರ್ತಿ ಗೋವಿಂದ ಸನಪ್ ಅಭಿಪ್ರಾಯಪಟ್ಟಿದ್ದು, ಜವಾಂಜಲ್ ಬಿಡುಗಡೆಗೆ ಆದೇಶಿಸಿದರು.
ಪ್ರಾಸಿಕ್ಯೂಷನ್ ಪ್ರಕಾರ, 3ನೇ ತರಗತಿ ವಿದ್ಯಾರ್ಥಿನಿ ಮನೆ ಪಕ್ಕದ ಸಮುದಾಯದ ದೇವಾಲಯ ಬಳಿಗೆ ಆಟವಾಡಲು ಹೋಗಿದ್ದಳು. ದೂರು ನೀಡಿದ ತಾಯಿಗೆ ಮಗಳು ಪತ್ತೆಯಾಗಿರಲಿಲ್ಲ. ಸ್ವಲ್ಪಹೊತ್ತಿನ ಬಳಿಕ, ಬಾಲಕಿ ಅದೇ ಆವರಣದಲ್ಲಿ ಆಟವಾಡುವುದು ಕಂಡುಬಂದಿತ್ತು ಹಾಗೂ ಶಾಲೆಗೆ ಬಿಟ್ಟುಬಂದಿದ್ದರು. ಶಾಲೆಯಿಂದ ಮರಳಿದ ಬಳಿಕ ಬಾಲಕಿ ಮಂಕು ಕವಿದಂತಿದ್ದಳು ಹಾಗೂ ಸಹಜವಾಗಿರಲಿಲ್ಲ. ಆರೋಪಿ ಸಿಹಿತಿಂಡಿ ನೀಡುವ ನೆಪದಲ್ಲಿ ಕರೆದೊಯ್ದು ಗುಪ್ತಾಂಗವನ್ನು ಸ್ಪರ್ಶಿಸಿದ ಹಾಗೂ ಆಗ ಅತೀವ ನೋವು ಆಗಿತ್ತು ಎಂದು ತಾಯಿಗೆ ಹೇಳಿದ್ದಳು. ತಾಯಿ ಅಸೇಗಾಂವ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡದ್ದರು.
"ಆರೋಪಿ ನನ್ನ ಮಗಳು ಆಟವಾಡುತ್ತಿದ್ದಾಗ ಪಕ್ಕದಲ್ಲೇ ಕುಳಿತಿದ್ದ" ಎಂದು ತಾಯಿ ಸಾಕ್ಷ್ಯ ನುಡಿದಿದ್ದರು. ಆದರೆ ಈ ಬಗ್ಗೆ ಎಚ್ಚರಿಕೆಯಿಂದ ಪರಿಶೀಲನೆ ನಡೆಸಿ ಮಗುವಿಗೆ ಯಾವುದೇ ಬಗೆಯ ಕಿರುಕುಳ ನೀಡಿಲ್ಲ ಎನ್ನುವ ನಿರ್ಧಾರಕ್ಕೆ ಕೋರ್ಟ್ ಬಂದಿದೆ. ಏಕೆಂದರೆ, ಆರೋಪಿಯ ಹೆಸರನ್ನು ಹೇಳುವಂತೆ ತಾಯಿ ತನಗೆ ಕಿರುಕುಳ ನೀಡಿದ್ದಾಗಿ ಬಾಲಕಿ ಸಾಕ್ಷ್ಯ ನುಡಿದಿರುವುದೇ ತಾಯಿಯ ಸಾಕ್ಷ್ಯವನ್ನು ನಾಶಪಡಿಸಿದಂತಾಗಿದೆ" ಎಂದು ನ್ಯಾಯಮೂರ್ತಿ ಸಂದೀಪ್ ಹೇಳಿದರು.