ನಮಾಝ್ ವಿರಾಮ ರದ್ದು: ಎನ್ ಡಿಎ ಮಿತ್ರಪಕ್ಷಗಳಿಂದಲೇ ಅಸ್ಸಾಂ ಸಿಎಂ ವಿರುದ್ಧ ವಾಗ್ದಾಳಿ
PC: fb.com/himantbiswasarma
ಹೊಸದಿಲ್ಲಿ: ಮುಸ್ಲಿಂ ಶಾಸಕರು ನಮಾಝ್ ಸಲ್ಲಿಸುವ ಸಲುವಾಗಿ ಶುಕ್ರವಾರ ಮಧ್ಯಾಹ್ನ ನೀಡಲಾಗುತ್ತಿದ್ದ ಎರಡು ಗಂಟೆಗಳ ವಿರಾಮವನ್ನು ರದ್ದುಪಡಿಸಿದ ಅಸ್ಸಾಂ ವಿಧಾನಸಭೆಯ ನಿರ್ಣಯವನ್ನು ಎನ್ ಡಿಎ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಎಲ್ ಜೆಪಿ ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ಉಭಯ ಪಕ್ಷಗಳ ಮುಖಂಡರು ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದರೆ ತಮ್ಮ ಕ್ರಮವನ್ನು ಶರ್ಮಾ ಸಮರ್ಥಿಸಿಕೊಂಡಿದ್ದು, ಹಿಂದೂ ಹಾಗೂ ಮುಸ್ಲಿಂ ಶಾಸಕರ ಒಮ್ಮತಾಭಿಪ್ರಾಯವನ್ನು ಪಡೆದೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಜುಮ್ಮಾ ಪ್ರಾರ್ಥನೆಗಾಗಿ ಎರಡು ಗಂಟೆಗಳ ಕಾಲ ಶುಕ್ರವಾರ ಮುಂದೂಡುವ ಕ್ರಮವನ್ನು ಕೊನೆಗೊಳಿಸಲು ಅಸ್ಸಾಂ ಸರ್ಕಾರ ಕೈಗೊಂಡ ನಿರ್ಧಾರವನ್ನು ಜೆಡಿಯು ಹಿರಿಯ ಮುಖಂಡ ನೀರಜ್ ಕುಮಾರ್ ಟೀಕಿಸಿದ್ದಾರೆ. ಶರ್ಮಾ ಇಂಥ ನಿರ್ಧಾರ ಕೈಗೊಳ್ಳುವ ಬದಲು ಬಡತನ ನಿರ್ಮೂಲನೆ ಮತ್ತು ಪ್ರವಾಹ ತಡೆಯಂಥ ಕಾರ್ಯಗಳಿಗೆ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
"ಅಸ್ಸಾಂ ಸಿಎಂ ಕೈಗೊಂಡಿರುವ ನಿರ್ಧಾರ ದೇಶದ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾದದ್ದು. ಪ್ರತಿಯೊಂದು ಧರ್ಮದ ನಂಬಿಕೆಯೂ ತನ್ನ ಸಂಪ್ರದಾಯವನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ರಂಝಾನ್ ವೇಳೆ ಶುಕ್ರವಾರದ ರಜೆಯನ್ನು ನಿಷೇಧಿಸುವ ಮೂಲಕ ಕೆಲಸದ ಕ್ಷಮತೆ ಹೆಚ್ಚುತ್ತದೆ ಎಂದು ನೀವು ಹೇಳುತ್ತಿದ್ದೀರಿ. ಹಿಂದೂ ಸಂಪ್ರದಾಯದ ಮಹತ್ವದ ಭಾಗ ಮಾ ಕಾಮಾಕ್ಯ ದೇವಸ್ಥಾನ. ಅಲ್ಲಿಯ ಬಲಿ ಪದ್ಧತಿಯನ್ನು ನಿಷೇಧಿಸಲು ನೀವು ಮುಂದಾಗುತ್ತೀರಾ?" ಎಂದು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೆಡಿಯು ಹಿರಿಯ ಮುಖಂಡ ಕೆ.ಸಿ.ತ್ಯಾಗಿ ಕೂಡಾ ಶರ್ಮಾ ಕ್ರಮವನ್ನು ಖಂಡಿಸಿದ್ದಾರೆ.
ಲೋಕಜನಶಕ್ತಿ ಪಕ್ಷದ ದೆಹಲಿ ಅಧ್ಯಕ್ಷ ರಾಜು ತಿವಾರಿ ಕೂಡಾ ಅಸ್ಸಾಂ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಸಲಹೆ ಮಾಡಿದ್ದಾರೆ.