ವಿಶ್ವದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿ: ಗೋವಿಂದ್ ಮೇಘವಾಲ್
(Photo Source- Twitter/ @GovindRMeghwal)
ಜೈಪುರ: ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳಬಹುದು ಎಂದು ರಾಜಸ್ಥಾನದ ವಿಕೋಪ ಪರಿಹಾರ ಖಾತೆ ಸಚಿವ ಗೋವಿಂದ್ ಮೇಘವಾಲ್ ಕರೆ ನೀಡಿದ್ದಾರೆ.
ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿಯವರಿಗೆ ನೀಡಿದ ಶಿಕ್ಷೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವ ಮೇಘವಾಲ್, ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
"ಬಿಜೆಪಿ ತನ್ನ ಎಲ್ಲೆಯನ್ನು ಮೀರಿದೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ವರೆಗೂ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಿರಬಾರದು. ನಾವು ಕಾನೂನನ್ನು ಕೈಗೆತ್ತಿಕೊಂಡಲ್ಲಿ, ಮೋದಿ ಹಾಗೂ ಅಮಿತ್ ಶಾ ಅವರನ್ನು ಅಧಿಕಾರದಿಂದ ಕಿತ್ತೊಗೆಯಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ" ಎಂದರು.
"ವಿಶ್ವದಲ್ಲಿ ಅತಿಹೆಚ್ಚು ಸುಳ್ಳು ಹೇಳುವ: ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ನರೇಂದ್ರ ಮೋದಿ ಪ್ರಜಾಪ್ರಭುತ್ವದ ಪ್ರಧಾನಿಯಲ್ಲ. ಅವರು ಅದಾನಿ-ಅಂಬಾನಿಯ ಪ್ರಧಾನಿ ಹಾಗೂ ಆರೆಸ್ಸೆಸ್ನ ಸಾಧನ. ಅವರು ದೇಶವನ್ನು ವಿಭಜಿಸುತ್ತಿರುವ ಅನಕ್ಷರಸ್ಥ ಪ್ರಧಾನಿ" ಎಂದು ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಗುಡುಗಿದರು.