ದೀರ್ಘಾವಧಿ ಮುಖ್ಯಮಂತ್ರಿ: ಜ್ಯೋತಿ ಬಸು ದಾಖಲೆ ಹಿಂದಿಕ್ಕಿದ ನವೀನ್ ಪಟ್ನಾಯಕ್
Photo: PTI
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ದೇಶದಲ್ಲಿ ಅತಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರ ಪೈಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಭಾನುವಾರ ರಾಜ್ಯದ ಮುಖ್ಯಮಂತ್ರಿಯಾಗಿ 23 ವರ್ಷ 139 ದಿನ ಪೂರೈಸಲಿರುವ ಪಟ್ನಾಯಕ್, ಈ ಹಿಂದೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಹೊಂದಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಸಿಕ್ಕಿಂ ಮುಖ್ಯಮಂತ್ರಿಯಾಗಿ 24 ವರ್ಷ 166 ದಿನಗಳ ಕಾಲ ಅಧಿಕಾರದಲ್ಲಿದ್ದ ಪವನ್ ಕುಮಾರ್ ಚಮ್ಲಿಂಗ್ ಮಾತ್ರ, ಇದೀಗ ಪಟ್ನಾಯಕ್ ಅವರಿಗಿಂತ ಮುಂದಿದ್ದಾರೆ. ಚಮ್ಲಿಂಗ್ 1994ರ ಡಿಸೆಂಬರ್ನಿಂದ 2019ರ ಮೇ ತಿಂಗಳ ವರೆಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿದ್ದರು. 23 ವರ್ಷ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದ ಆಳ್ವಿಕೆ ನಡೆಸಿದ್ದ ಜ್ಯೋತಿ ಬಸು 2000ನೇ ಇಸ್ವಿಯಲ್ಲಿ ಅಧಿಕಾರ ತೊರೆದಿದ್ದರು. ಆದರೆ ಚಮ್ಲಿಂಗ್ 2019ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ನವೀನ್ ತಂದೆ ಬಿಜು ಪಟ್ನಾಯಕ್ 1997ರಲ್ಲಿ ಮೃತಪಟ್ಟಾಗ ಅವರ ವಿರೋಧಿಗಳು ಹಾಗೂ ಹಿತೈಷಿಗಳು, ನವೀನ್ ಪಟ್ನಾಯಕ್ ಅವರನ್ನು ಅನನುಭವಿ ಎಂದು ತಿರಸ್ಕರಿಸಿದ್ದರು. 76 ವರ್ಷ ವಯಸ್ಸಿನ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರ ಗಳಿಸಿದರೆ, ದೇಶದಲ್ಲಿ ಸುಧೀರ್ಘ ಅವಧಿಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದವರ ಪಟ್ಟಿಯಲ್ಲಿ ನವೀನ್ ಅಗ್ರಸ್ಥಾನಕ್ಕೇರಲಿದ್ದಾರೆ.
ನವೀನ್ ಆಕಸ್ಮಿಕ ರಾಜಕಾರಣಿ ಎಂದು ಆರಂಭಿಕ ದಿನಗಳಲ್ಲಿ ಕರೆಸಿಕೊಂಡಿದ್ದರು. ಆದರೆ ಡೂನ್ ಸ್ಕೂಲ್ ಮತ್ತು ಸಂತ ಜೋಸೆಫ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ನವೀನ್ ರಾಜಕೀಯ ಕಲೆಯನ್ನು ಬಹುಬೇಗ ಕರಗತ ಮಾಡಿಕೊಂಡರು. ತಂದೆಯ ನಿಧನದಿಂದ ತೆರವಾಗಿದ್ದ ಅಸ್ಕಾ ಕ್ಷೇತ್ರದ ಉಪಚುನಾವಣೆಯಲ್ಲಿ 1997ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಬಿಜೆಪಿ ನೆರವಿನೊಂದಿಗೆ ಪಟ್ನಾಯಕ್ ಹಾಗೂ ಇತರರು ಜನತಾದಳದಿಂದ ಸಿಡಿದು ಬಿಜು ಜನತಾ ದಳ ಆರಂಭಿಸಿದ್ದರು. ಮರು ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಬಿಜೆಪಿ ಜತೆಗೆ ಕೈಜೋಡಿಸಿತು. ಪಟ್ನಾಯಕ್ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಸೇರಿ, ಕೇಂದ್ರದ ಉಕ್ಕು ಮತ್ತು ಗಣಿಗಾರಿಕೆ ಸಚಿವರಾದರು.
1999ರಲ್ಲಿ ಭೀಕರ ಚಂಡಮಾರುತಕ್ಕೆ ಒಡಿಶಾದಲ್ಲಿ 10 ಸಾವಿರಕ್ಕೂ ಮಂದಿ ಬಲಿಯಾಗದೇ ಇದ್ದಿದ್ದರೆ, ಬಹುಶಃ ಪಟ್ನಾಯಕ್ ಕೇಂದ್ರ ಸಚಿವರಾಗಿಯೇ ಮುಂದುವರಿಯುತ್ತಿದ್ದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸೃಷ್ಟಿಯಾದ ಸರಣಿ ವಿವಾದಗಳು ಕೂಡಾ ನವೀನ್ ಹಾದಿ ಸುಗಮಗೊಳಿಸಿತು. 2000ನೇ ಇಸವಿಯ ಮಾರ್ಚ್ನಿಂದ ನವೀನ್ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ.