ಅಗ್ನಿವೀರ್ ಯೋಜನೆಯಲ್ಲಿ ಮಾರ್ಪಾಡುಗಳನ್ನು ಮಾಡುವಂತೆ ಆಗ್ರಹಿಸಿದ ಎನ್ಡಿಎ ಮಿತ್ರ ಪಕ್ಷ ಜೆಡಿ(ಯು)
PC : PTI
ಹೊಸದಿಲ್ಲಿ: ಕೇಂದ್ರದಲ್ಲಿ ರಚನೆಯಾಗಲಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಭಾಗವಾಗಿರುವ ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷದ ಹಿರಿಯ ನಾಯಕ ಹಾಗೂ ವಕ್ತಾರ ಕೆ ಸಿ ತ್ಯಾಗಿ ಇಂದು ಸುದ್ದಿಗಾರರ ಜೊತೆ ಮಾತನಾಡಿ ತಮ್ಮ ಪಕ್ಷವು ಅಗ್ನಿವೀರ್ ಯೋಜನೆಯಲ್ಲಿ ಮಾರ್ಪಾಡುಗಳನ್ನು ಕೋರಿದೆ ಎಂದು ಹೇಳಿದ್ದಾರೆ.
“ಅಗ್ನಿವೀರ್ ಯೋಜನೆಯನ್ನು ಜಾರಿಗೊಳಿಸಿದ್ದಾಗಿನಿಂದ ಅದು ಭಾರೀ ಟೀಕೆಗೊಳಗಾಗಿದೆ. ಅದು ಚುನಾವಣೆಯಲ್ಲೂ ಪರಿಣಾಮ ಬೀರಿದೆ. ಸೇನೆಗೆ ನೇಮಕಾತಿಗಾಗಿ ಇರುವ ಈ ಅಗ್ನಿವೀರ್ ಯೋಜನೆಯಲ್ಲಿ ಬದಲಾವಣೆಗಳ ಅಗತ್ಯವಿದೆ,” ಎಂದು ಅವರು ಹೇಳಿದ್ದಾರೆ.
“ಮತದಾರರ ಒಂದು ವರ್ಗ ಈ ಅಗ್ನಿವೀರ್ ಯೋಜನೆಯಿಂದ ಅಸಂತುಷ್ಟವಾಗಿದೆ. ಜನರು ಪ್ರಶ್ನಿಸುತ್ತಿರುವ ಈ ಯೋಜನೆಯ ಕೆಲವೊಂದು ಲೋಪಗಳನ್ನು ವಿವರವಾಗಿ ಚರ್ಚಿಸಿ ಅವುಗಳನ್ನು ಸರಿಪಡಿಸುವುದು ನಮಗೆ ಬೇಕಿದೆ, ಸಮಾನ ನಾಗರಿಕ ಸಂಹಿತೆ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿ ತಿಳಿಸಿದ ಹಾಗೆ ನಾವು ಅದರ ವಿರುದ್ಧವಲ್ಲ, ಆದರೆ ಎಲ್ಲಾ ಸಂಬಂಧಿತರ ಜೊತೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ,” ಎಂದು ತ್ಯಾಗಿ ಹೇಳಿದರು.