ಮಹಾರಾಷ್ಟ್ರ | ʼಲವ್ ಜಿಹಾದ್ʼ ವಿರುದ್ಧದ ಕಾನೂನಿಗೆ ಕೇಂದ್ರ ಸಚಿವ ರಾಮದಾಸ್ ಅಠವಳೆ ವಿರೋಧ
"ಅಂತರ್ಧರ್ಮೀಯ ವಿವಾಹಗಳಿಗೆ ʼಲವ್ ಜಿಹಾದ್ʼ ಎಂಬ ಹಣೆಪಟ್ಟಿ ಕಟ್ಟಬಾರದು"

ಕೇಂದ್ರ ಸಚಿವ ರಾಮದಾಸ್ ಅಠವಳೆ (PTI)
ಹೊಸದಿಲ್ಲಿ : ʼಲವ್ ಜಿಹಾದ್ʼ ವಿರುದ್ಧ ಕಾನೂನು ರೂಪಿಸುವ ಮಹಾರಾಷ್ಟ್ರ ಸರಕಾರದ ಕ್ರಮಕ್ಕೆ ಎನ್ ಡಿಎ ಮೈತ್ರಿಪಕ್ಷದ ನಾಯಕ, ಕೇಂದ್ರ ಸಚಿವ ರಾಮದಾಸ್ ಅಠವಳೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರನ್ನು ಸಮಾನರು ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರಕಾರ ಇತ್ತೀಚೆಗೆ ನಿರ್ಣಯವನ್ನು ಹೊರಡಿಸಿದ್ದು, ಇತರ ರಾಜ್ಯಗಳಲ್ಲಿನ ಕಾನೂನುಗಳನ್ನು ಅಧ್ಯಯನ ಮಾಡಿ ಶಾಸನವನ್ನು ಶಿಫಾರಸು ಮಾಡಲು ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇತೃತ್ವದ ಸಮಿತಿಯನ್ನು ರಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನೇತೃತ್ವದ ಎನ್ ಡಿಎಯ ಭಾಗವಾಗಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಮುಖ್ಯಸ್ಥ ಸಚಿವ ರಾಮದಾಸ್ ಅಠವಳೆ, ಅಂತರ್ಧರ್ಮೀಯ ವಿವಾಹಗಳಿಗೆ ʼಲವ್ ಜಿಹಾದ್ʼ ಎಂಬ ಹಣೆಪಟ್ಟಿ ಕಟ್ಟಬಾರದು. ಆದರೆ, ಬಲವಂತದ ಮತಾಂತರವನ್ನು ತಡೆಯಬೇಕು . ʼಲವ್ ಜಿಹಾದ್ʼ ಎಂದು ಕರೆಯುವುದು ತಪ್ಪು, ಮತಾಂತರ ತಡೆಯಲು ಕ್ರಮಕೈಗೊಳ್ಳಬೇಕು. ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡ ರಾಮದಾಸ್ ಅಠಾವಳೆ, ಅವರು ಎಲ್ಲಾ ಸಮುದಾಯಗಳಲ್ಲಿ ಸಮಾನತೆ ಮತ್ತು ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಮುಸ್ಲಿಮರು ಕೂಡ ಅದರ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದ್ದಾರೆ.