ಈಶಾನ್ಯದಲ್ಲಿ ಮತ್ತೆ ಪ್ರಾಬಲ್ಯ ಮೆರೆದ NDA; ಮಣಿಪುರದಲ್ಲಿ ಮುಖಭಂಗ
ಸಾಂದರ್ಭಿಕ ಚಿತ್ರ
ಗುವಾಹಟಿ: ಈಶಾನ್ಯ ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಆದರೆ 2019ರಲ್ಲಿ ತೋರಿದ್ದ ಸಾಧನೆಯನ್ನು ಪುನಾರವರ್ತಿಸಲು ಅದಕ್ಕೆ ಸಾಧ್ಯವಾಗಿಲ್ಲ.
ಈಶಾನ್ಯ ಭಾರತದ ರಾಜ್ಯಗಳಲ್ಲಿ 25 ಲೋಕಸಭಾ ಕ್ಷೇತ್ರಗಳಿದ್ದು ಅಸ್ಸಾಂ 14, ಮಣಿಪುರ, ತ್ರಿಪುರಾ, ಮೇಘಾಲಯ ಹಾಗೂ ಅರುಣಾಚಲಪ್ರದೇಶ ತಲಾ 2, ತ್ರಿಪುರಾ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳು ತಲಾ ಎರಡು, ನಾಗಾಲಾಂಡ್, ಮಿಜೋರಾಂ ಹಾಗೂ ಸಿಕ್ಕಿಂ ತಲಾ 1 ಸ್ಥಾನವನ್ನು ಹೊಂದಿವೆ. ಅಸ್ಸಾಂ, ಅರುಣಾಚಲ, ತ್ರಿಪುರಾ ಹಾಗೂ ಮಣಿಪುರಗಳಲ್ಲಿ ಬಿಜೆಪಿ ಆಳ್ವಿಕೆಯಿದ್ದರೆ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಆಡಳಿತಾರೂಢ ಮೈತ್ರಿಕೂಟಗಳ ಅಂಗಪಕ್ಷವಾಗಿದೆ.
ಈಶಾನ್ಯ ಭಾರತದ ಏಳು ರಾಜ್ಯಗಳ ಒಟ್ಟು 25 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು 15ರಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿದ್ದು, ಇತರರು ಇನ್ನೆರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
2019ರಲ್ಲಿ ಬಿಜೆಪಿ ನೇತೃತ್ವದ NDA 25 ಸ್ಥಾನಗಳ ಪೈಕಿ 19 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ, ಯುಪಿಎ 4 ಹಾಗೂ ಇತರರು 2 ಸ್ಥಾನಗಳಲ್ಲಿ ವಿಜಯಿಯಾಗಿದ್ದರು.
ಅಸ್ಸಾಂನಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರ ಮಿತ್ರ ಪಕ್ಷಗಳಾದ ಅಸ್ಸಾಂ ಗಣ ಪರಿಷತ್ ಹಾಗೂ ಯುಪಿಪಿ (ಎಲ್) ತಲಾ ಒಂದು ಸ್ಥಾನವನ್ನು ಜಯಿಸಿದ್ದಾರೆ. ನಾಲ್ಕು ಸ್ಥಾನಗಳು ಕಾಂಗ್ರೆಸ್ನ ಪಾಲಾಗಿವೆ.
ತ್ರಿಪುರಾ ಹಾಗೂ ಅರುಣಾಚಲ ಪ್ರದೇಶದ ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ತ್ರಿಪುರಾ ಪೂರ್ವ ಹಾಗೂ ತ್ರಿಪುರಾ ಪಶ್ಚಿಮ ಕ್ಷೇತ್ರದಲ್ಲಿ ಅದು ಭಾರೀ ಮತಗಳ ಅಂತರದೊಂದಿಗೆ ಜಯ ಸಾಧಿಸಿದೆ. ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಸ್ಪರ್ಧಿಸಿದ್ದರು.
ಇತ್ತ ಅರುಣಾಚಲದಲ್ಲಿಯೂ ಕೇಂದ್ರ ಸಚಿವ ಕಿರಣ್ ರಿಜಿಜು (ಅರುಣಾಚಲ ಪಶ್ಚಿಮ) ಹಾಗೂ ಹಾಲಿ ಬಿಜೆಪಿ ಸಂಸದ ತಾಪಿರ್ ಗಾವ್ (ಅರುಣಾಚಲ ಪೂರ್ವ) ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಕಳೆದ ವರ್ಷ ಭೀಕರ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಒಳ ಮಣಿಪುರ ಹಾಗೂ ಹೊರ ಮಣಿಪುರ ಈ ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವನ್ನು ಕಂಡಿದೆ.
ಒಳಮಣಿಪುರ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ, ಮಿತ್ರ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್), ಹೊರಮಣಿಪುರ ಕ್ಷೇತ್ರದಿಂದ ಸ್ಪರ್ಧಿಸಿತ್ತು.
ಮಣಿಪುರದ ಮೈತೆಯಿ ಹಾಗೂ ಕುಕಿ ಝೋ ಬುಡಕಟ್ಟು ನಡುವೆ ಭೀಕರ ಸಂಘರ್ಷದಿಂದ ಉಂಟಾದ ಪರಿಸ್ಥಿತಿಯನ್ನು ಬಿಜೆಪಿ ಸರಕಾರ ನಿರ್ವಹಿಸಿದ ರೀತಿಯ ಬಗ್ಗೆ ರಾಜ್ಯದ ಜನತೆಯಲ್ಲಿ ಉಂಟಾಗಿದ್ದ ಆಕ್ರೋಶವೇ , ಚುನಾವಣೆಯಲ್ಲಿ ಪಕ್ಷಕ್ಕೆ ತಿರುಗುಬಾಣವಾಯಿತೆಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಮಣಿಪುರ ಹಿಂಸಾಚಾರದಲ್ಲಿ 219 ಮೃತಪಟ್ಟು, 60 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು.
ಇತ್ತ ಮೇಘಾಲಯದಲ್ಲಿಯೂ ಬಿಜೆಪಿಯ ಮಿತ್ರಪಕ್ಷ, ರಾಜ್ಯದ ಆಡಳಿತಾರೂಢ ನ್ಯಾಶನಲ್ ಪೀಪಲ್ಸ್ ಪಾರ್ಟಿ ಕೂಡಾ ಭಾರೀ ಸೋಲು ಕಂಡಿದೆ.
ತುರಾ ಕ್ಷೇತ್ರದಲ್ಲಿ ಮೇಘಾಲಯದ ಹಾಲಿ ಸಂಸದ, ಎನ್ಪಿಪಿ ಆಘಾತ ಸಂಗ್ಮಾ ಅವರನ್ನು ಕಾಂಗ್ರೆಸ್ನ ಸಾಲೆಂಗ್ ಎ.ಸಂಗ್ಮಾ 1.55 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಶಿಲ್ಲಾಂಗ್ನಲ್ಲಿ ವಾಯ್ಸ್ ಆಫ್ ಪೀಪಲ್ಸ್ ಪಾರ್ಟಿ ಪಕ್ಷದ ಅಧ್ಯಕ್ಷ ಡಾ.ರಿಕ್ಕಿ ಆ್ಯಂಡ್ರೂ ಜೆ. ಸಿಂಗ್ಗೊನ್ ಅವರು 3.7ಲಕ್ಷ ಮತಗಳ ಗೆಲುವು ಅಂತರದ ಗೆಲುವು ಕಂಡಿದ್ದಾರೆ. ಪ್ರಸಕ್ತ ಈ ಕ್ಷೇತ್ರದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿನ್ಸೆಂಟ್ ಎಚ್. ಪಾಲಾ ಅವರು ಸಂಸದರಾಗಿದ್ದಾರೆ. ಶಿಲ್ಲಾಂಗ್ನಲ್ಲಿ ಎನ್ಪಿಪಿ ಪಕ್ಷವು ವಿಪಿಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿಂತಲೂ ಹಿಂದೆ ಬಿದ್ದಿದೆ.
ನಾಗಾಲ್ಯಾಂಡ್ ಕಾಂಗ್ರೆಸ್ ಪಾಲಾಗಿದ್ದರೆ, ಮಿಝಾರಾಂನ ಏಕೈಕ ಸ್ಥಾನವು ರೆರಾಂ ಪೀಪಲ್ಸ್ ಮೂವ್ಮೆಂಟ್ ಗೆದ್ದಿದೆ. ಸಿಕ್ಕಿಂನಲ್ಲಿ ಆಡಳಿತಾರೂಢ ಎಸ್ಕೆಎಂ ವಿಜಯಿಯಾಗಿದೆ.
2023ರಿಂದ ನಾಗಾಲ್ಯಾಂಡ್ನಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯ ಗೆಲುವು ಪುನಶ್ಚೇತನ ನೀಡಿದೆ.