ನೀರಜ್ ಚೋಪ್ರಾ ನಿವ್ವಳ ಮೌಲ್ಯ 37 ಕೋಟಿ ರೂ.; ನದೀಮ್ ಸಂಪತ್ತು ಎಷ್ಟು ಗೊತ್ತೇ?
ನೀರಜ್ ಚೋಪ್ರಾ| ಅರ್ಷದ್ ನದೀಮ್ (PC: PTI)
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ದಾಖಲೆ ಬರೆದು ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಮತ್ತು ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಛೋಪ್ರಾ ನಡುವಿನ ನಿಕಟ ಪೈಪೋಟಿ ಇದೀಗ ಎಲ್ಲೆಡೆ ಚರ್ಚೆಯ ವಸ್ತು. ಹಿರಿಯರ ವಿಭಾಗದಲ್ಲಿ ಸರಿ ಸುಮಾರು ಒಂದೇ ಸಮಯದಲ್ಲಿ ಸ್ಪರ್ಧೆ ಆರಂಭಿಸಿದ ಇಬ್ಬರ ನಡುವೆ ಹಲವು ಸಾಮ್ಯತೆಗಳೂ ಇವೆ. ಈ ಹಿಂದೆ ಯೂರೋಪಿಯನ್ನರ ಪ್ರಾಬಲ್ಯ ಇದ್ದ ಈ ಕ್ರೀಡೆಯಲ್ಲಿ ಎರಡು ಸತತ ಒಲಿಂಪಿಕ್ಸ್ ಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯಾದ ನೆರೆಹೊರೆಯ ದೇಶಗಳು ಗಮನ ಸೆಳೆದಿವೆ. ಕಳೆದ ಬಾರಿ ಚೋಪ್ರಾ ಚಿನ್ನ ಗೆದ್ದರೆ ಈ ಬಾರಿ ನದೀಮ್ ಗೆ ಅಗ್ರಸ್ಥಾನ ಲಭಿಸಿದೆ.
ಚೋಪ್ರಾ ಈ ಸೀಸನ್ ನಲ್ಲೇ ಅತ್ಯಧಿಕ ಅಂದರೆ 89.45 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಉತ್ತಮ ಪ್ರದರ್ಶನ ತೋರಿದರೂ, ನದೀಮ್ ಹೊಸ ಒಲಿಂಪಿಕ್ಸ್ ದಾಖಲೆ ಬರೆದು 92.97 ಮೀಟರ್ ಎಸೆಯುವ ಮೂಲಕ ಭಾರತದ ಸ್ಪರ್ಧಿಯನ್ನು ಹಿಂದಿಕ್ಕಿದರು. ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
ಕಳೆದ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಇದೀಗ ಒಮೇಗಾ, ಅಂಡರ್ ಆರ್ಮೋರ್ ಮತ್ತಿತರ ಖ್ಯಾತ ಬ್ರಾಂಡ್ ಗಳ ರಾಯಭಾರಿಯಾಗಿ ಸುಮಾರು 37 ಕೋಟಿ ರೂಪಾಯಿ ಸಂಪತ್ತು ಗಳಿಸಿದ್ದಾರೆ. ಆದರೆ ನದೀಮ್ ಅವರ ಒಟ್ಟು ಸಂಪತ್ತು ಒಲಿಂಪಿಕ್ಸ್ ಗೆ ಮುನ್ನ 1 ಕೋಟಿಗಿಂತಲೂ ಕೆಳಗಿತ್ತು.
ಆದರೆ ಒಲಿಂಪಿಕ್ಸ್ ಬಳಿಕ ಇದು ಹಲವು ಪಟ್ಟು ಹೆಚ್ಚಲಿದೆ. ನಿಖರವಾದ ಅಂಕಿ ಸಂಖ್ಯೆ ಲಭ್ಯ ಇಲ್ಲವಾದರೂ, 15.3 ಕೋಟಿ ಪಾಕಿಸ್ತಾನಿ ರೂಪಾಯಿಯ ಬಹುಮಾನವನ್ನು ಪಾಕಿಸ್ತಾನ ಸರ್ಕಾರ ಮತ್ತು ಪ್ರಾಂತ ಸರ್ಕಾರಗಳು ಘೋಷಿಸಿವೆ. ಪಾಕಿಸ್ತಾನದ ಪಂಜಾಬ್ ಸಿಎಂ ಮರ್ಯಮ್ ನವಾಜ್ 10 ಕೋಟಿ ಪಾಕಿಸ್ತಾನಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅಂತೆಯೇ ಗವರ್ನರ್ 20 ಲಕ್ಷ ಬಹುಮಾನ ನೀಡಿದ್ದಾರೆ.