ನೀಟ್: ಮಗನ ಪರವಾಗಿ ಪರೀಕ್ಷೆ ಬರೆಯಲು ವಿಷಯತಜ್ಞನಿಗೆ 4 ಲಕ್ಷ ನೀಡಿದ್ದ ವೈದ್ಯ!
PC: PTI
ಪ್ರಯಾಗ್ರಾಜ್: ಇತ್ತೀಚಿನ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರ ದೃಷ್ಟಿ ಇದೀಗ ಪ್ರಯಾಗ್ ರಾಜ್ ನ ನೈನಿ ಪ್ರದೇಶದ ವೈದ್ಯ ಮತ್ತು ಆತನ ಮಗನ ವಿರುದ್ಧ ಹರಿದಿದೆ. ನೀಟ್ ಆಕಾಂಕ್ಷಿ ಮಗನ ಪರವಾಗಿ ನೀಟ್ ಪರೀಕ್ಷೆ ಬರೆಯಲು ವೈದ್ಯ, ವಿಷಯತಜ್ಞ ನಿಗೆ ನಾಲ್ಕು ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಇವರ ಬಂಧನಕ್ಕೆ ಬಿಹಾರ ಪೊಲೀಸರು ಯತ್ನಿಸಿದ್ದು, ಫಲ ನೀಡಿಲ್ಲ. ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ.
ಎಡಿಎ ಕಾಲೋನಿಯ ನಿವಾಸಿ ಡಾ.ಆರ್.ಪಿ.ಪಾಂಡೆ ಎಂಬ ವೈದ್ಯ ನೈನಿ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದ. ಈತನ ಮಗ ರಾಜ್ ಪಾಂಡೆ ನೀಟ್ ಆಕಾಂಕ್ಷಿಯಾಗಿದ್ದ. ಮೇ 5ರಂದು ರಾಜ್ ಪಾಂಡೆ ಪರವಾಗಿ ಪರೀಕ್ಷೆ ಬರೆಯಲು ಬಿಹಾರದ ಮುಜಾಫರ್ಪುರ ಜಿಲ್ಲೆಯ ಮಳೀಘಾಟ್ ಡಿಎವಿ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ 'ವಿಷಯ ಪರಿಹರಿಸುವ ತಜ್ಞ'ನೊಬ್ಬನನ್ನು ವಶಕ್ಕೆ ಪಡೆಯಲಾಗಿತ್ತು ಎಂಬ ವಿಷಯ ತನಿಖೆಯಿಂದ ದೃಢಪಟ್ಟಿದೆ.
ಪರೀಕ್ಷೆ ಬರೆಯಲು ಆಗಮಿಸಿದ್ದ ವ್ಯಕ್ತಿಯನ್ನು ಹುಕ್ಮಾ ರಾಮ್ ಎಂದು ಗುರುತಿಸಲಾಗಿದೆ. ಈತ ಜೋಧಪುರ ಎಐಐಎಂಎಸ್ ನ ಎಂಬಿಬಿಎಸ್ ವಿದ್ಯಾರ್ಥಿ. ಬಯೋಮೆಟ್ರಿಕ್ ಪರೀಕ್ಷೆಯ ಬಳಿಕವೂ ಹುಕ್ಮಾ ರಾಮ್ ವಿದ್ಯಾರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥಾಪಕರ ವಿರುದ್ಧವೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಹಾರ ಪೊಲೀಸರು ರಾಜ್ ಪಾಂಡೆ ಹಾಗೂ ಆತನ ತಂದೆಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಪ್ರಯಾಗ್ ರಾಜ್ ಪೊಲೀಸರು ಹೇಳಿದ್ದಾರೆ. ರಾಜ್ಪಾಂಡೆ, ಹುಕ್ಮಾ ರಾಮ್ ಎಂಬಾತನನ್ನು ನೀಟ್ ಕೋಚಿಂಗ್ ಪಡೆಯುತ್ತಿದ್ದ ಕೋಟಾದಲ್ಲಿ ಭೇಟಿ ಮಾಡಿದ್ದ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.