ಮೋದಿ ಸರಕಾರದ ನಿರ್ಲಕ್ಷ್ಯವೇ ಕಾರಣ : ದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ

PC : PTI
ಹೊಸದಿಲ್ಲಿ : ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಮೋದಿ ಸರಕಾರದ ನಿರ್ಲಕ್ಷ್ಯ, ಅವ್ಯವಸ್ಥೆಯೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ ಅನೇಕ ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರಿಗೆ ಗಾಯಗಳಾಗಿವೆ ಎಂಬ ಸುದ್ದಿ ತಿಳಿದು ಅತ್ಯಂತ ದುಃಖಕರವಾಗಿದೆ. ಈ ಘಟನೆಯು ರೈಲ್ವೆ ಇಲಾಖೆಯ ವೈಫಲ್ಯ ಮತ್ತು ಸರಕಾರದ ನಿರ್ಲಕ್ಷ್ಯವನ್ನು ಮತ್ತೊಮ್ಮೆ ತೆರೆದಿಟ್ಟಿದೆ. ಪ್ರಯಾಗ್ರಾಜ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿರುವುದನ್ನು ಪರಿಗಣಿಸಿ, ರೈಲು ನಿಲ್ದಾಣದಲ್ಲಿ ಉತ್ತಮ ವ್ಯವಸ್ಥೆ ಮಾಡಬೇಕಿತ್ತು. ದುರಾಡಳಿತ ಮತ್ತು ನಿರ್ಲಕ್ಷ್ಯದಿಂದ ಯಾರೂ ಪ್ರಾಣ ಕಳೆದುಕೊಳ್ಳದಂತೆ ಸರಕಾರ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್, ಕೇಂದ್ರ ಸರಕಾರದ ಮೂಗಿನ ನೇರಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಈ ರೀತಿಯ ಅನಾಹುತವು ಸರಕಾರವು ಸಂಪೂರ್ಣ ಅಸಮರ್ಥವಾಗಿದೆ, ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ, ನಿಜವಾಗಿಯೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬವುದನ್ನು ಸೂಚಿಸುತ್ತದೆ. ಸರಕಾರ ಮತ್ತೆ ಪರಿಸ್ಥಿತಿ ಬಗ್ಗೆ ವಾಸ್ತವಾಂಶವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಮೃತರ ಮತ್ತು ಗಾಯಗೊಂಡವರ ಬಗ್ಗೆ ನಿಖರವಾದ ಅಂಕಿಅಂಶಗಳು ನಮಗೆ ಯಾವಾಗ ತಿಳಿಯುತ್ತದೆ? ಜನಸಂದಣಿ ನಿಯಂತ್ರಣ ಕ್ರಮಗಳನ್ನು ಏಕೆ ಜಾರಿಗೊಳಿಸಿಲ್ಲ? ಮಹಾಕುಂಭ ಮೇಳದ ಸಂದರ್ಭದಲ್ಲಿ ಈ ರೀತಿಯ ಜನಸಂದಣಿ ನಿರೀಕ್ಷಿಸಬಹುದು ಎಂದು ಗೊತ್ತಿದ್ದರೂ ರೈಲ್ವೆ ಇಲಾಖೆ ಏಕೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ, ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಮೃತಪಟ್ಟ ಸುದ್ದಿ ತಿಳಿದು ದುಃಖಿತಳಾಗಿದ್ದೇನೆ. ಅಗಲಿದ ಆತ್ಮಗಳಿಗೆ ದೇವರು ಶಾಂತಿ ನೀಡಲಿ. ಮೃತರ ಕುಟುಂಬಸ್ಥರಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.