ಒಡಿಶಾ: ಹಾಸ್ಟೆಲ್ ನಲ್ಲಿ ನೇಪಾಳದ ವಿದ್ಯಾರ್ಥಿನಿ ಆತ್ಮಹತ್ಯೆ; ಕೆಐಐಟಿ ಕ್ಯಾಂಪಸ್ ಉದ್ವಿಗ್ನ

PC: x.com/AdityaRajKaul
ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ)ಯಲ್ಲಿ ನೇಪಾಳದ ವಿದ್ಯಾರ್ಥಿನಿಯೊಬ್ಬಳು ತನ್ನ ಕೊಠಡಿಯಲ್ಲಿ ಆತ್ಮಹತ್ಯೆಗೈದ ಘಟನೆ ಬಳಿಕ ಕ್ಯಾಂಪಸ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಬಿಟೆಕ್ ವಿದ್ಯಾರ್ಥಿನಿ ಪ್ರಕೃತಿ ಲಮ್ಸಾಲ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಹತ್ತಾರು ಮಂದಿ ನೇಪಾಳಿ ವಿದ್ಯಾರ್ಥಿಗಳು ಗುಂಪು ಸೇರಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಕ್ಯಾಂಪಸ್ ನಿಂದ ತಮ್ಮನ್ನು ಬಲವಂತವಾಗಿ ಹೊರ ಕಳುಹಿಸಲಾಗುತ್ತಿದೆ ಎಂದು ದೂರಿದ್ದಾರೆ.
ಮಾಜಿ ಪ್ರಿಯಕರನ ಕಿರುಕುಳ ತಡೆಯಲಾರದೇ ಪ್ರಕೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹಲವು ಜಾಲತಾಣ ಪೋಸ್ಟ್ ಗಳಲ್ಲಿ ಪ್ರತಿಪಾದಿಸಲಾಗಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಆಕೆಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ವಿದ್ಯಾರ್ಥಿನಿಯ ಸಂಬಂಧಿಕರು ದೂರು ನೀಡಿದ್ದಾರೆ. ಕೆಐಐಟಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲೂ ಈ ಅಂಶವನ್ನು ಒತ್ತಿ ಹೇಳಲಾಗಿದೆ.
"ನೇಪಾಳದಿಂದ ಆಗಮಿಸಿ ಅಧ್ಯಯನ ಮಾಡುತ್ತಿದ್ದ ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿ ಕೆಐಐಟಿಯ ಮತ್ತೊಬ್ಬ ವಿದ್ಯಾರ್ಥಿ ಜತೆ ಪ್ರೇಮ ಸಂಬಂಧ ಹೊಂದಿದ್ದಳು ಎಂದು ಶಂಕಿಸಲಾಗಿದೆ. ಯಾವುದೋ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ" ಎಂದು ವಿವರಿಸಲಾಗಿದೆ.
ವಿದ್ಯಾರ್ಥಿಯೊಬ್ಬನ ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಪಿನಾಕ್ ಮಿಶ್ರಾ ವಿವರಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ. ಪೊಲೀಸರು ಮೃತ ವಿದ್ಯಾರ್ಥಿನಿಯ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ವೈಜ್ಞಾನಿಕ ತನಿಖೆ ನಡೆಸುತ್ತಿದ್ದಾರೆ.