ನೆಸ್ಲೆ, ಪೆಪ್ಸಿಕೋ, ಯುನಿಲಿವರ್ ಭಾರತದಲ್ಲಿ ಕಡಿಮೆ ಆರೋಗ್ಯಕರ ಉತ್ಪನ್ನಗಳನ್ನು ಮಾರುತ್ತಿವೆ: ವರದಿ
ಸಾಂದರ್ಭಿಕ ಚಿತ್ರ (credit: moneycontrol)
ಹೊಸದಿಲ್ಲಿ: ಲಾಭೋದ್ದೇಶವಿಲ್ಲದ ಸಂಸ್ಥೆ ಅಸೆಸ್ ಟು ನ್ಯೂಟ್ರಿಷನ್ ಇನಿಷಿಯೇಟಿವ್ (ಎಟಿಎನ್) ಪ್ರಕಟಿಸಿರುವ ಜಾಗತಿಕ ಸೂಚ್ಯಂಕದ ಪ್ರಕಾರ ನೆಸ್ಲೆ, ಪೆಪ್ಸಿಕೋ ಮತ್ತು ಯುನಿಲಿವರ್ (Nestle, PepsiCo, Unilever) ಸೇರಿದಂತೆ ಪ್ರಮುಖ ಆಹಾರ ಮತ್ತು ಪಾನೀಯ ಕಂಪನಿಗಳು ಭಾರತದಂತಹ ಕಡಿಮೆ ಆದಾಯದ ದೇಶಗಳಲ್ಲಿ ಕಡಿಮೆ ಆರೋಗ್ಯಕರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
30 ಕಂಪನಿಗಳು ಹೆಚ್ಚಿನ ಆದಾಯದ ದೇಶಗಳಲ್ಲಿ ಮಾರಾಟ ಮಾಡುತ್ತಿರುವ ಉತ್ಪನ್ನಗಳಿಗೆ ಹೋಲಿಸಿದರೆ ಕಡಿಮೆ ಆದಾಯದ ದೇಶಗಳಲ್ಲಿಯ ಉತ್ಪನ್ನಗಳು ಆಸ್ಟ್ರೇಲಿಯಾ ಮತ್ತು ನ್ಯೂಝಿಲಂಡ್ ಅಭಿವೃದ್ಧಿಗೊಳಿಸಿರುವ ಆರೋಗ್ಯ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಕಡಿಮೆ ರೇಟಿಂಗ್ಗಳನ್ನು ಪಡೆದಿವೆ ಎನ್ನುವುದನ್ನು ಎಟಿಎನ್ಐ ಕಂಡುಕೊಂಡಿದೆ.
ಕಡಿಮೆ ಆದಾಯದ ದೇಶಗಳಿಗೆ ಸರಾಸರಿ ಅಂಕ 5ರಲ್ಲಿ ಕೇವಲ 1.8 ಆಗಿದ್ದರೆ ಹೆಚ್ಚು ಆದಾಯದ ದೇಶಗಳಿಗೆ ಇದು 2.3 ಆಗಿತ್ತು. 3.5ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ಉತ್ಪನ್ನಗಳನ್ನು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.
ಈ ಕಂಪನಿಗಳು ಬಡದೇಶಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿವೆ,ಆದರೆ ಅಲ್ಲಿ ತಮ್ಮ ಆರೋಗ್ಯಕರ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದು ಈ ದೇಶಗಳಲ್ಲಿಯ ಸರಕಾರಗಳಿಗೆ ಜಾಗ್ರತವಾಗಿರಲು ಎಚ್ಚರಿಕೆಯ ಗಂಟೆಯಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಟಿಎನ್ಐನ ಸಂಶೋಧನಾ ನಿರ್ದೇಶಕ ಮಾರ್ಕ್ ವಿಜ್ನೆ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವಾದ್ಯಂತ ಒಂದು ಶತಕೋಟಿಗೂ ಅಧಿಕ ಜನರು ಬೊಜ್ಜಿನ ಸಮಸ್ಯೆಯನ್ನು ಹೊಂದಿದ್ದಾರೆ. ವಿಶ್ವಬ್ಯಾಂಕಿನ ಅಂದಾಜಿನಂತೆ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಶೇ.70ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.