ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಗಿಂತ ನೇತಾಜಿ ಕೊಡುಗೆ ಅಧಿಕ: ಆರ್ ಎನ್ ರವಿ
ಆರ್.ಎನ್. ರವಿ|Photo: PTI
ಚೆನ್ನೈ: 1947ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಮಹಾತ್ಮಾಗಾಂಧೀಜಿಗಿಂತ ಸುಭಾಶ್ಚಂದ್ರ ಭೋಸ್ ಹೆಚ್ಚಿನ ಕೊಡುಗೆ ನೀಡಿದ್ದಾರೆಂದು ಹೇಳುವ ಮೂಲಕ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತೊಮ್ಮೆ ವಿವಾದಕ್ಕೆ ಗ್ರಾಸವಾಗಿದ್ದಾರೆ.
‘‘ ಮಹಾತ್ಮಾಗಾಂಧಿ ನೇತೃತ್ವದ ಭಾರತ ಸ್ವಾತಂತ್ರ್ಯ ಚಳವಳಿಯು 1942ರ ಬಳಿಕ ಅಪ್ರಸಕ್ತವೆನಿಸಿತ್ತು. ಒಂದು ವೇಳೆ ನೇತಾಜಿ ಅವರು ಇಲ್ಲದೆ ಇದ್ದಲ್ಲಿ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆಯುತ್ತಿರಲಿಲ್ಲ’’ ಎಂದು ಅವರ ಹೇಳಿದ್ದಾರೆ. ನೇತಾಜಿಯವರ 127ನೇ ಜನ್ಮದಿನಾಚರಣೆಯ ಅಂಗವಾಗಿ ಮಂಗಳವಾರ ಚೆನ್ನೈನ ಅಣ್ಣಾ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಎರಡನೇ ಮಹಾಯುದ್ಧ ಆರಂಭಗೊಂಡ ಆನಂತರ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಚಳವಳಿಯು ಕಾವು ಕಳೆದುಕೊಂಡಿತ್ತು. 1942ರ ಆನಂತರದ ಮಹಾತ್ಮಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಗಮನಿಸಿದಾಗ, ಅದೊಂದು ಮಹತ್ವದ ಘಟನೆಯೇ ಆಗಿರಲಿಲ್ಲ. ಅ ಅವಧಿಯಲ್ಲಿ ಏನೂ ಸಂಭವಿಸಲಿಲ್ಲ. ನಾವು ಪರಸ್ಪರ ಜಗಳವಾಡುವುದಾದರಲ್ಲಿಯೇ ಮಗ್ನರಾಗಿದ್ದೆವು. ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿತ್ತು. ಹೀಗೆ ನಾವು ವಿಭಜಿತರಾಗಿದ್ದೆವು. ಬಿಟಿಷರು ಅದನ್ನು ಆನಂದಿಸುತ್ತಿದ್ದರು. 1942ರ ಬಳಿಕ ಭಾರತದಲ್ಲಿ ಪ್ರಬಲವಾದ ಹೋರಾಟವೇ ನಡೆದಿರಲಿಲ್ಲ. ನಾವು ನಿಮ್ಮೊಂದಿಗೆ ಸಹಕರಿಸಬೇಕಾದರೆ ನಮಗೆ ಸ್ವಾತಂತ್ರ್ಯದ ಭರವಸೆ ನೀಡಬೇಕೆಂದು ಬ್ರಿಟಿಶರಲ್ಲಿ ನಾವು ಹೇಳುತ್ತಲೇ ಇದ್ದೆವು. ಆದರೆ ಅದಕ್ಕೆ ಬ್ರಿಟಿಷರು ಒಪ್ಪುತ್ತಿರಲಿಲ್ಲ. ವಾಸ್ತವಿಕವಾಗಿ ಅವರಿಗೆ ಇಲ್ಲಿ ಯಾವುದೇ ಸಮಸ್ಯೆಯಿದ್ದಿರಲಿಲ್ಲ. ಭಾರತದಲ್ಲಿ ಅವರು ಇನ್ನೂ ಹಲವಾರು ವರ್ಷಗಳವರೆಗೆ ಅವರ ಉಳಿದುಕೊಳ್ಳಬಹುದಾಗಿತ್ತು. ಆದರೆ ನೇತಾಜಿಯವರ ಹೋರಾಟದಿಂದ ಬ್ರಿಟಿಶರಿಗೆ ಅಡ್ಡಿಯಾಯಿತು ಎಂದರು.
ಆದರೆ ಭಾರತವು ಸ್ವಾತಂತ್ರ್ಯವನ್ನು ಪಡೆಯುವಲ್ಲಿ ನೇತಾಜಿಯವರಿಗೆ ನಾವು ಚಿರಋಣಿಗಳಾಗಿರಬೇಕು ಎಂದು ಹೇಳುವುದರಲ್ಲಿ ಯಾವುದೇ ಉತ್ಫ್ರೇಕ್ಷೆಯಿಲ್ಲ ಎಂದು ರಾಜ್ಯಪಾಲರು ತಿಳಿಸಿದರು. ‘‘ಇಂತಹ ಮಹಾನ್ ವ್ಯಕ್ಚಿಯನ್ನು ನಮ್ಮ ಸ್ವಾತಂತ್ರ ಚಳವಳಿಯ ಇತಿಹಾಸದಲ್ಲಿ ಬದಿಗೆ ಸರಿಸಲು ಹೇಗೆ ಸಾಧ್ಯ. ಹಾಗೆ ಮಾಡುವುದು ಅತಿ ದೊಡ್ಡ ಕೃತಘ್ನತೆಯಾಗುತ್ತದೆ ಎಂದರು. ನಾವು ಕೃತಘ್ನ ಜನರಿರುವ ದೇಶವಲ್ಲ. ನಮ್ಮ ತಾಯ್ನಾಡು ಭಾರಕೆಕ್ಕೆ ನೇತಾಜಿಯವರ ಕೊಡುಗೆಯ ಹೆಮ್ಮೆಯ ಪರಂಪರೆಯನ್ನು ನಾವು ಮರಳಿ ಪಡೆದುಕೊಳ್ಳಬೇಕಾಗಿದೆ’’ ಎಂದವರು ಹೇಳಿದರು.
ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಮಹಿಳಾ ಸೇನಾಪಡೆಯನ್ನು ಹೊಂದುವ ನೇತಾಜಿಯವರ ದೂರದೃಷ್ಟಿಯನ್ನು ಕೂಡಾ ರವಿ ಶ್ಲಾಘಿಸಿದರು. ಆದರೆ ಸೇನೆಯಲ್ಲಿ ಮಹಿಳೆಯನ್ನು ಸಮರಪಾತ್ರಕ್ಕೆ ನಿಯೋಜಿಸಲು ಭಾರತಕ್ಕೆ ಸ್ವಾತಂತ್ರ್ಯಾನಂತರ ಏಳು ದಶಕಗಳೇ ಬೇಕಾದವು ಎಂದು ರವಿ ತಿಳಿಸಿದರು.
ಗಾಂಧೀಜಿ ಕುರಿತ ರಾಜ್ಯಪಾಲ ರವಿ ಅವರ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಆಳಗಿರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರವಿ ಅವರು ಸೇಡಿನ ಭಾವನೆಯೊಂದಿಗೆ ಮಹಾತ್ಮಾಗಾಂಧೀಜಿಯವರನ್ನು ತೃಣೀಕರಿಸಿದ್ದಾರೆಂದು ಅವರು ಟೀಕಿಸಿದ್ದಾರೆ. ರಕ್ತವನ್ನು ಚೆಲ್ಲದೆ, ಗಾಂಧೀಜಿ ನಡೆಸಿದ ಅಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದವರು ಹೇಳಿದರು.