"ರಾಜಕೀಯಕ್ಕಾ ಗಿ ಇತಿಹಾಸವನ್ನು ತಿರುಚಬಾರದು": ʼಸುಭಾಸ್ ಚಂದ್ರ ಬೋಸ್ ಪ್ರಥಮ ಪ್ರಧಾನಿʼ ಎಂಬ ಕಂಗನಾ ಹೇಳಿಕೆಗೆ ನೇತಾಜಿ ಕುಟುಂಬದ ಟೀಕೆ
ಕಂಗನಾ ರಣಾವತ್
ಹೊಸದಿಲ್ಲಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ಭಾರತದ ಪ್ರಥಮ ಪ್ರಧಾನಿ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಕಂಗನಾ ರಣಾವತ್ ನೀಡಿದ ಹೇಳಿಕೆಯನ್ನು ನೇತಾಜಿ ಅವರ ಕುಟುಂಬ ತೀಕ್ಷ್ಣವಾಗಿ ಖಂಡಿಸಿದೆ.
ಎಕ್ಸ್ ನಲ್ಲಿ ಸುದ್ದಿ ಲೇಖನವೊಂದನ್ನು ಶೇರ್ ಮಾಡಿದ ನೇತಾಜಿ ಅವರ ಮರಿ ಅಳಿಯ ಚಂದ್ರ ಕುಮಾರ್ ಬೋಸ್, “ಯಾರೂ ಕೂಡ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಇತಿಹಾಸವನ್ನು ತಿರುಚಬಾರದು,” ಎಂದು ಹೇಳಿದ್ದಾರೆ.
“ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ರಾಜಕೀಯ ಚಿಂತಕರು, ಸೈನಿಕರು, ಮುತ್ಸದ್ದಿ, ದಾರ್ಶನಿಕರು ಮತ್ತು ಅವಿಭಜಿತ ಭಾರತದ ಪ್ರಥಮ ಪ್ರಧಾನಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಎಲ್ಲಾ ಸಮುದಾಯಗಳನ್ನು ಭಾರತೀಯರು ಎಂಬ ಅಡಿಯಲ್ಲಿ ಒಗ್ಗೂಡಿಸಬಲ್ಲ ಏಕೈಕ ನಾಯಕರಾಗಿದ್ದರು. ಅವರ ಸರ್ವರನ್ನೊಳಗೊಂಡ ಸಿದ್ಧಾಂತವನ್ನು ಅನುಸರಿಸುವುದು ಅವರಿಗೆ ತೋರಬಹುದಾದ ನಿಜವಾದ ಗೌರವ,” ಎಂದು ಚಂದ್ರ ಕುಮಾರ್ ಬೋಸ್ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ತಮ್ಮ ಸಿದ್ಧಾಂತವು ಬಿಜೆಪಿಯ ಸಿದ್ಧಾಂತಗಳೊಂದಿಗೆ ಹೊಂದಿಕೆಯಾಗದು ಎಂದು ಹೇಳಿ ಕಳೆದ ವರ್ಷ ಎದ್ದಿದ್ದ ಇಂಡಿಯಾ ವರ್ಸಸ್ ಭಾರತ್ ವಿವಾದದ ನಂತರ ಚಂದ್ರ ಕುಮಾರ್ ಬೋಸ್ ಬಿಜೆಪಿಗೆ ರಾಜೀನಾಮೆ ನೀಡಿದ್ದರು.
ಸಿಂಗಾಪುರದಲ್ಲಿ 1943ರಲ್ಲಿ ಆಝಾದ್ ಹಿಂದ್ನ ಸರ್ಕಾರವನ್ನು ನೇತಾಜಿ ರಚಿಸಿ ತಮ್ಮನ್ನು ಅದರ ಪ್ರಥಮ ಪ್ರಧಾನಿಯೆಂದು ಘೋಷಿಸಿದ್ದರೆಂಬ ಮಾಹಿತಿ ನೀಡುವ ಲೇಖನದ ಸ್ಕ್ರೀನ್ಶಾಟ್ ಅನ್ನು ಶೇರ್ ಮಾಡಿ ಕಂಗನಾ ತನ್ನ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.