ಹೊಸದಿಲ್ಲಿ: ಕಲ್ಕಾಜಿ ಮಂದಿರದಲ್ಲಿ ವೇದಿಕೆ ಕುಸಿದು ಮಹಿಳೆ ಮೃತ್ಯು; ಹಲವರಿಗೆ ಗಾಯ
Photo: twitter.com/CurlyTalesIndia
ಹೊಸದಿಲ್ಲಿ : ಶನಿವಾರ ಮಧ್ಯರಾತ್ರಿ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದ ಮಾತಾ ಜಾಗರಣ ಸಮಾರಂಭದಲ್ಲಿ ಕಬ್ಬಿಣ ಮತ್ತು ಮರದಿಂದ ಮಾಡಿದ ವೇದಿಕೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿಲ್ಲ, ಆದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುಮಾರು 1500-1600 ಜನರು ಕಾರ್ಯಕ್ರಮದಲ್ಲಿ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 337, 304A ಮತ್ತು 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮುಖ್ಯ ವೇದಿಕೆಯ ಬಳಿ ಸಂಘಟಕರು ಮತ್ತು ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ಒಂದು ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಈ ವೇದಿಕೆಯ ಮೇಲೆ ಕುಳಿತ ಮತ್ತು ನಿಂತ ಜನರ ಭಾರವನ್ನು ತಾಳಲಾರದೆ ಎತ್ತರದ ವೇದಿಕೆ ಕೆಳಕ್ಕೆ ಬಿತ್ತು. ಇದರಿಂದ ವೇದಿಕೆಯ ಕೆಳಗೆ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ
ಎಲ್ಲಾ ಗಾಯಾಳುಗಳನ್ನು ಆಂಬ್ಯುಲೆನ್ಸ್ಗಳ ಮೂಲಕ ನಗರದ ಏಮ್ಸ್ ಟ್ರಾಮಾ ಸೆಂಟರ್, ಸಫ್ದರ್ಜಂಗ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
STORY | 1 dead, 17 injured as stage collapses at Delhi's Kalkaji temple
— Press Trust of India (@PTI_News) January 28, 2024
READ: https://t.co/DIBWXKyDTG
VIDEO:
(Full video available on PTI Videos - https://t.co/n147TvqRQz) pic.twitter.com/bo1fm3immb